ಒಲಿಂಪಿಕ್ಸ್: ಪದಕ ಗಳಿಕೆಯಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಸಾಧನೆ

Update: 2021-08-07 15:35 GMT

 ಹೊಸದಿಲ್ಲಿ, ಆ.7: ಒಂದು ವರ್ಷ ತಡವಾಗಿ ಆರಂಭವಾದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವು ಭಾರೀ ವಿಶ್ವಾಸ ಹಾಗೂ ನಿರೀಕ್ಷೆಗಳೊಂದಿಗೆ  ದೊಡ್ಡ ತಂಡವನ್ನು ಜಪಾನ್‌ಗೆ ಕಳುಹಿಸಿಕೊಟ್ಟಿತು. ಶನಿವಾರ ಪುರುಷರ ಜಾವೆಲಿನ್ ಎಸೆತದಲ್ಲಿ ಸ್ಟಾರ್ ಅತ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಜಯಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಲ್ಲದೆ ಭಾರತವು ಒಲಿಂಪಿಕ್ಸ್ ವೊಂದರಲ್ಲಿ ಒಟ್ಟು 7 ಪದಕಗಳನ್ನು ಜಯಿಸಲು ನೆರವಾದರು. ಈ ಮೂಲಕ ಒಲಿಂಪಿಕ್ಸ್ ನಲ್ಲ್ಲಿ ಭಾರತವು ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿತು.

ಭಾರತವು 2012ರ ಲಂಡನ್ ಒಲಿಂಪಿಕ್ಸ್ ಪದಕದ ಸಾಧನೆ(6 ಪದಕ)ಯನ್ನು ಮೀರಿ ನಿಂತಿತು. ಭಾರತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕವನ್ನು ಜಯಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಭಾರತದ ಪದಕದ ಖಾತೆ ತೆರೆದಿದ್ದರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸುವುದರೊಂದಿಗೆ 26ರ ಹರೆಯದ ಮಣಿಪುರದ ಚಾನು ಇತಿಹಾಸ ನಿರ್ಮಿಸಿದ್ದರು.

ಆ ನಂತರ ಪದಕದ ಭರವಸೆಗಳಾಗಿದ್ದ ಶೂಟರ್‌ಗಳು ಹಾಗೂ ಬಿಲ್ಗಾರರು ವಿಫಲರಾದರು. ಶೂಟಿಂಗ್ ಸ್ಪರ್ಧೆಯ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಯುವ ಶೂಟರ್ ಸೌರಭ್ ಚೌಧರಿ ಮಾತ್ರ ಫೈನಲ್ ಸುತ್ತು ತಲುಪಿದರೂ ಅವರಿಗೆ ಪದಕ ದಕ್ಕಲಿಲ್ಲ.

ಬಾಕ್ಸಿಂಗ್‌ನಲ್ಲಿ ಹಲವು ಖ್ಯಾತನಾಮರು ನಿರಾಸೆಗೊಳಿಸಿದರೂ ಅಸ್ಸಾಂನ 23ರ ವಯಸ್ಸಿನ ಲವ್ಲೀನಾ ಬೊರ್ಗೊಹೈನ್ ಮಹಿಳೆಯರ ವೆಲ್ಟರ್‌ವೇಟ್ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಪ್ರವೇಶಿಸಿ ಭಾರತಕ್ಕೆ ಪದಕ ಖಚಿತಪಡಿಸಿದರು.

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರಿಂದ ಈ ಬಾರಿ ಚಿನ್ನದ ಪದಕ ನಿರೀಕ್ಷಿಸಲಾಗಿತ್ತು. ಆದರೆ ಅವರು ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ತೈ ಝು ಯಿಂಗ್ ವಿರುದ್ಧ ಸೋಲನುಭವಿಸಿ ನಿರಾಸೆಗೊಳಿಸಿದರು. ಕಂಚಿನ ಪದಕ ತನ್ನದಾಗಿಸಿಕೊಂಡರು.

ಕುಸ್ತಿಪಟು ರವಿ ಕುಮಾರ ದಹಿಯಾ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದುಕೊಂಡರು. ನಿರೀಕ್ಷೆ ಮೂಡಿಸಿದ್ದ ಬಜರಂಗ್ ಪುನಿಯಾ ಹಾಗೂ ವಿನೇಶ್ ಫೋಗಟ್ ಪೈಕಿ ಪುನಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಫೋಗಟ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದರು.

ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಸ್ಫೂರ್ತಿಯುತ ಪ್ರದರ್ಶನದಿಂದ ಗಮನ ಸೆಳೆದವು. ರಾಣಿ ರಾಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಕಳಪೆ ಆರಂಭದಿಂದ ಚೇತರಿಸಿಕೊಂಡು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿ ಸೆಮಿ ಫೈನಲ್ ತಲುಪಿತ್ತು. ಮತ್ತೊಂದೆಡೆ ಪುರುಷರ ತಂಡ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿಯನ್ನು ಸೋಲಿಸಿ 41 ವರ್ಷಗಳ ಬಳಿಕ ದೇಶಕ್ಕೆ ಮೊದಲ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟಿತ್ತು.

2020ರ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ

ಚಿನ್ನ: ನೀರಜ್ ಚೋಪ್ರಾ

ಬೆಳ್ಳಿ: ಮೀರಾಬಾಯಿ ಚಾನು, ರವಿ ಕುಮಾರ್ ದಹಿಯಾ

ಕಂಚು: ಪಿ.ವಿ.ಸಿಂಧು, ಲವ್ಲೀನಾ ಬೊರ್ಗೊಹೈನ್, ಫೀಲ್ಡ್ ಹಾಕಿ, ಬಜರಂಗ್ ಪುನಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News