ಜಾನುವಾರು ಆಪದ್ಬಾಂಧವ ಪಶು ಸಂಜೀವಿನಿ ಆ್ಯಂಬುಲೆನ್ಸ್

Update: 2021-08-09 05:43 GMT

ಮಂಗಳೂರು : ರೋಗ-ರುಜಿನದಿಂದ ಬಳಲುವ ಜಾನು ವಾರುಗಳಿಗೆ ರೈತರ ಮನೆ ಬಾಗಿಲಲ್ಲೇ ತಜ್ಞ ಪಶು ವೈದ್ಯಕೀಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಆರಂಭವಾಗಿರುವ ‘ಪಶು ಸಂಜೀವಿನಿ’ ಸಂಚಾರಿ ಪಶುಚಿಕಿತ್ಸಾ ಆ್ಯಂಬುಲೆನ್ಸ್ ಜಿಲ್ಲೆಯಲ್ಲಿ ಜಾನುವಾರುಗಳ ಪಾಲಿಗೆ ವರವಾಗಿದೆ.

ಸುಮಾರು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿ 70ಕ್ಕೂ ಅಧಿಕ ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ಸಹಿತ ಉನ್ನತ ಮಟ್ಟದ ಚಿಕ್ಸಿತೆ ನೀಡಲಾಗಿದೆ. 2020ರ ಅಕ್ಟೋಬರ್‌ನಲ್ಲಿ ಈ ಸೇವೆಗೆ ಚಾಲನೆ ಸಿಕ್ಕಿದ್ದು, ಅಲ್ಲಿಂದ ಮಾರ್ಚ್ 2021ರ ವರೆಗೆ ಒಟ್ಟು 30 ಹಾಗೂ 2021 ಏಪ್ರಿಲ್‌ನಿಂದ ಆಗಸ್ಟ್‌ನ ಮೊದಲ ವಾರದವರೆಗೆ 40ಕ್ಕೂ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.

ಜಾನುವಾರುಗಳ ಪ್ರಾಣಕ್ಕೆ ಅಪಾಯವಾಗುವ, ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯ ವಾಗದ ಸಂದರ್ಭ ಆ್ಯಂಬುಲೆನ್ಸ್ ಸೇವೆ ಬಳಸಲಾಗುತ್ತದೆ. ಪ್ರಸವಕ್ಕೆ ಸಂಬಂಧಿಸಿದ ತೊಂದರೆ, ವಿಷಪ್ರಾಶನ, ಹೊಟ್ಟೆ ಉಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆ ಮುರಿತ, ಕ್ಯಾನ್ಸರ್, ಟ್ಯೂಮರ್‌ನಂತಹ ಅಪಾಯಕಾರಿ ರೋಗ ಹಾಗೂ ಸಾಧಾರಣ ಚಿಕಿತ್ಸೆಗೆ ಸ್ಪಂದಿಸದ ಸಮಯದಲ್ಲಿ ಆಂಬುಲೆನ್ಸ್ ನಲ್ಲಿ ತೆರಳಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುತ್ತಾರೆ ಮಂಗಳೂರು ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ರಾಮ್‌ಪ್ರಕಾಶ್ ಡಿ.

ಸ್ಥಳೀಯ ವೈದ್ಯರು ಮಂಗಳೂರಿನ ಪಾಲಿಕ್ಲಿನಿಕ್ ಸಂಪರ್ಕಿಸಿ ರೋಗದ ಕುರಿತು ಮಾಹಿತಿ ನೀಡಬೇಕು. ಆಗ ಅದಕ್ಕೆ ಸಂಬಂಧಿಸಿದ ಉಪಕರಣಗಳ ಸಹಿತ ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸಲಿದೆ. ದನ, ಎಮ್ಮೆ, ಕುರಿ, ಮೇಕೆಗೆ ಪ್ರಾಶಸ್ತ್ಯ. ಅವುಗಳ ಪ್ರಾಣಹಾನಿ ತಪ್ಪಿಸಿ ರೈತರ ಆರ್ಥಿಕ ನಷ್ಟದಿಂದ ಪಾರು ಮಾಡುವುದು ಈ ಯೋಜನೆಯ ಗುರಿಯಾಗಿದೆ.

ಪಶುಸಂಜೀವಿನಿ ಆ್ಯಂಬುಲೆನ್ಸ್ ಸೇವೆ ರಾಜ್ಯದ 15 ಜಿಲ್ಲೆ ಗಳಲ್ಲಿ ಮಾತ್ರ ಆರಂಭಿಸಲಾಗಿದೆ. ಬೀದರ್, ರಾಯಚೂರು, ಕಲಬುರಗಿ, ಧಾರವಾಡ, ವಿಜಯಪುರ, ಬೆಳಗಾವಿ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಪಾಲಿಕ್ಲಿನಿಕ್‌ಗಳಲ್ಲಿ ಈ ಸೌಲಭ್ಯವಿದೆ. ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ವಿಸ್ತರಿಸಲು ರಾಜ್ಯ ಸರಕಾರ ಉದ್ದೇಶಿಸಿದೆ.

ವೈದ್ಯ-ಸಿಬ್ಬಂದಿ ಕೊರತೆ: ರಾಜ್ಯ ಸರಕಾರವು ಆ್ಯಂಬುಲೆನ್ಸ್ ಸೌಲಭ್ಯ ನೀಡಿದ್ದರೂ ವೈದ್ಯರು-ಸಿಬ್ಬಂದಿಯನ್ನು ಇನ್ನು ಒದಗಿಸಿಲ್ಲ. ಶಾಶ್ವತ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗಾಗಲೆೀ ಇಬ್ಬರು ವೈದ್ಯರು, ಕಂಪೌಂಡರ್,‘ಡಿ’ ದರ್ಜೆಯ ಇಬ್ಬರು ನೌಕರರ ನೇಮಕವಾದರೂ ನಿಯೋಜನೆಯಾಗಿಲ್ಲ. ಪ್ರಸ್ತುತ ಪಶು ಆಸ್ಪತ್ರೆಗಳ ತಜ್ಞ ವೈದ್ಯರು ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ನಲ್ಲಿ ತೆರಳುತ್ತಾರೆ ಎಂದು ಮಂಗಳೂರು ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ರಾಮ್‌ಪ್ರಕಾಶ್ ಡಿ. ವಿವರಿಸಿದರು.

ಪಶು ಸಂಜೀವಿನಿ ಆ್ಯಂಬುಲೆನ್ಸ್ ಮೂಲಕ ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ಆ್ಯಂಬುಲೆನ್ಸ್ ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯ ಹೊಂದಿರುವುದರಿಂದ, ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಕೆಲವೆಡೆ ಶಿಬಿರ ಆಯೋಜಿಸುವಾಗಲೂ ವಾಹನ ನಿಯೋಜಿಸಲಾಗುತ್ತಿದೆ.

 ಡಾ.ರಾಮ್‌ಪ್ರಕಾಶ್ ಡಿ., ಉಪನಿರ್ದೇಶಕರು, ಪಾಲಿಕ್ಲಿನಿಕ್ ಮಂಗಳೂರು

ಆ್ಯಂಬುಲೆನ್ಸ್‌ ನಲ್ಲಿ ಏನೇನಿದೆ?

ಜಾನುವಾರುಗಳಿಗೆ ಸಂಜೀವಿನಿಯಂತಿರುವ ಸುಸಜ್ಜಿತ ಆ್ಯಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕಾನಿಂಗ್ ಉಪಕರಣಗಳ ಅಳವಡಿಕೆಗೆ ಅವಕಾಶ. 250 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್, ಎಸಿ ವ್ಯವಸ್ಥೆ, ಬಿಸಿನೀರು, ಪಶು ವೈದ್ಯರು, ಸಿಬ್ಬಂದಿಗೆ ಆಸನ ವ್ಯವಸ್ಥೆ, ಕೈ ತೊಳೆಯುವ ಬೇಸಿನ್, ಎಲ್‌ಇಡಿ ಲೈಟ್, ಆಮ್ಲಜನಕ ಸಪೋರ್ಟ್ ಸಿಸ್ಟಂ, ಶಸ್ತ್ರಚಿಕಿತ್ಸಾ ಉಪಕರಣಗಳು, ಮರಣೋತ್ತರ ಪರೀಕ್ಷೆ ಕಿಟ್, ಪ್ರಸೂತಿ ಕಿಟ್, ಔಷಧಿ ಮೊದಲಾದವುಗಳನ್ನು ಒಳಗೊಂಡಿದೆ.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News