×
Ad

ಸಂಸದರು, ಶಾಸಕರ ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ಒಪ್ಪಿಗೆಯಿಲ್ಲದೆ ಹಿಂದೆಗೆದುಕೊಳ್ಳುವಂತಿಲ್ಲ: ಸುಪ್ರೀಂ

Update: 2021-08-10 22:12 IST

ಹೊಸದಿಲ್ಲಿ,ಆ.10: ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಮಹತ್ವದ ತೀರ್ಪೊಂದರಲ್ಲಿ ಸಂಸದರು ಅಥವಾ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಇಂತಹ ಪ್ರಕರಣಗಳ ಮೇಲ್ವಿಚಾರಣೆಯನ್ನು ಹೊಂದಿರುವ ಉಚ್ಚ ನ್ಯಾಯಾಲಯಗಳ ಅನುಮತಿಯಿಲ್ಲದೆ ಹಿಂದೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿದೆ.

 ಹಿರಿಯ ವಕೀಲ ವಿಜಯ ಹನ್ಸಾರಿಯಾ ಮತ್ತು ನ್ಯಾಯವಾದಿ ಸ್ನೇಹಾ ಕಲಿಟಾ ಅವರು ರಾಜ್ಯಗಳ ಆಡಳಿತ ಪಕ್ಷಕ್ಕೆ ಸೇರಿದ ವಿಧಾನಸಭಾ ಸದಸ್ಯರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವುದನ್ನು ಪ್ರಸ್ತಾಪಿಸಿರುವ ನಿದರ್ಶನಗಳನ್ನು ಬೆಟ್ಟು ಮಾಡಿದ ಬಳಿಕ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿತು. ಪೀಠವು ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಕೋರಿದ್ಧ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವಿಷಯದಲ್ಲಿ ಹನ್ಸಾರಿಯಾ ಮತ್ತು ಕಲಿಟಾ ಅವರು ಅಮಿಕಸ್ ಕ್ಯೂರಿಗಳಾಗಿ ಪೀಠಕ್ಕೆ ನೆರವಾಗುತ್ತಿದ್ದಾರೆ.

ಸಂಸದರು ಮತ್ತು ಶಾಸಕರ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ) ದಾಖಲಿಸಿರುವ ಬಾಕಿಯುಳಿದಿರುವ ಪ್ರಕರಣಗಳ ವಿವರಗಳನ್ನು ಒದಗಿಸುವುದನ್ನು ಸರಕಾರಕ್ಕೆ ಅಗತ್ಯವಾಗಿಸಿರುವ ತನ್ನ ಹಿಂದಿನ ಮೂರು ಆದೇಶಗಳ ಪಾಲನೆಯಲ್ಲಿ ಕೇಂದ್ರದ ವೈಫಲ್ಯದ ಕುರಿತು ಅಸಮಾಧಾನವನ್ನೂ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,‘ನಾವು ಈ ವಿಷಯವನ್ನು ಕೈಗೆತ್ತಿಕೊಂಡಾಗ ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರಕಾರವು ಬದ್ಧತೆಯನ್ನು ವ್ಯಕ್ತಪಡಿಸಿತ್ತು. ಆದರೆ ಈ ನಿಟ್ಟಿನಲ್ಲಿ ಅದೇನೂ ಮಾಡಿಲ್ಲ ಎಂದಷ್ಟೇ ನಾವು ಹೇಳಬಲ್ಲೆವು’ ಎಂದು ಹೇಳಿತು. 

ಈಡಿ ಸೋಮವಾರ ರಾತ್ರಿ ತನ್ನ ಪಟ್ಟಿಯನ್ನು ಸಲ್ಲಿಸಿದ್ದರೆ,ಸಿಬಿಐ ಪಟ್ಟಿಯನ್ನು ಸಲ್ಲಿಸುವಲ್ಲಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಪೀಠವು ಈ ಚಾಟಿಯನ್ನು ಬೀಸಿದೆ.
ಪಟ್ಟಿಯನ್ನು ಒದಗಿಸಲು ಸಿಬಿಐಗೆ ಯಾವುದೇ ಹಿಂಜರಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಸರಕಾರದ ಪರವಾಗಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ನಮ್ಮ ಕೊರತೆಯನ್ನು ನಾವು ಒಪ್ಪಿಕೊಳ್ಳುತ್ತೇವೆ. ಸಮನ್ವಯತೆಯ ಕೊರತೆಯಿಂದಾಗಿ ಈ ಲೋಪವುಂಟಾಗಿದೆ ಎಂದು ತಿಳಿಸಿದರು.

ಕೇರಳ ರಾಜ್ಯ ವಿರುದ್ಧ ಕೆ.ಅಜಿತ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ 2020,ಸೆ.16ರಿಂದ ಸಂಸದರು ಮತ್ತು ಶಾಸಕರ ವಿರುದ್ಧ ಪ್ರಕರಣಗಳ ಹಿಂದೆಗೆತವನ್ನು ಪರಿಶೀಲಿಸುವಂತೆ ಪೀಠವು ತನ್ನ ಆದೇಶದಲ್ಲಿ ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿದೆ.

ಪ್ರಕರಣವನ್ನು ಹಿಂದೆಗೆದುಕೊಳ್ಳಲು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸುವ ಅರ್ಜಿಯ ಬಗ್ಗೆ ಸಾಮಾನ್ಯವಾಗಿ ವಿಚಾರಣಾ ನ್ಯಾಯಾಲಯವೇ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತದೆ. ಆದರೆ ಈಗ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದಾಗಿ ವಿಚಾರಣಾ ನ್ಯಾಯಾಧೀಶರು ಇಂತಹ ಕ್ರಮದಿಂದ ದೂರವಿರಬೇಕಾಗುತ್ತದೆ.

ಕೆ.ಅಜಿತ್ ಪ್ರಕರಣದಲ್ಲಿ ಆಡಳಿತಾರೂಢ ಎಲ್ಡಿಎಫ್ ನಾಯಕರ ವಿರುದ್ಧ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಕೋರಿ ಕೇರಳ ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಹಿಂದೆಗೆತ ಅರ್ಜಿಗಳನ್ನು ನಿರ್ಧರಿಸಲು ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ವಿಧಿಸಿತ್ತು. ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿದ್ದರೆ ಮಾತ್ರ ಪ್ರಕರಣಗಳ ಹಿಂದೆಗೆತಕ್ಕೆ ಅನುಮತಿ ನೀಡಬೇಕು ಎಂದು ಅದು ನಿರ್ದೇಶಿಸಿತ್ತು.

ರಾಜ್ಯದ 61 ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಕರ್ನಾಟಕ ಸರಕಾರವು 2020,ಆಗಸ್ಟ ನಲ್ಲಿ ಹೊರಡಿಸಿದ್ದ ನಿರ್ದೇಶಗಳನ್ನೂ ಹನ್ಸಾರಿಯಾ ಮತ್ತು ಕಲಿಟಾ ಅವರ ವರದಿಯು‌ ಪ್ರಸ್ತಾಪಿಸಿದೆ. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಅಧಿಸೂಚನೆಯ ಆಧಾರದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ನೀಡಿದ್ದ ಆದೇಶದಿಂದಾಗಿ ಈ ವಿಷಯವು ಮುಂದುವರಿದಿರಲಿಲ್ಲ. 

ಮುಝಫ್ಫರ್ನಗರ ದಂಗೆಗಳ ಸಂದರ್ಭದಲ್ಲಿ ಸಮುದಾಯವೊಂದರ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತನ್ನ ಕೆಲವು ಶಾಸಕರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ಉ.ಪ್ರದೇಶ ಸರಕಾರದ ಪ್ರಸ್ತಾವನೆಯನ್ನೂ ಹನ್ಸಾರಿಯಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ದಂಗೆಗಳಲ್ಲಿ 65 ಜನರು ಮೃತಪಟ್ಟು,ಸುಮಾರು 40,000 ಜನರು ನಿರ್ವಸಿತರಾಗಿದ್ದರು.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಕನಿಷ್ಠ ಎರಡು ವರ್ಷಗಳ ಕಾಲ ವರ್ಗಾವಣೆಗೊಳಿಸುವಂತಿಲ್ಲ. ಮುಂದಿನ ಆದೇಶದವರೆಗೆ ನ್ಯಾಯಾಧೀಶರು ತಮ್ಮ ಹುದ್ದೆಗಳಲ್ಲಿಯೇ ಮುಂದುವರಿಯಬೇಕು,ಅವರು ನಿವೃತ್ತಿಯಾಗುತ್ತಿದ್ದರೆ ಇದು ಅನ್ವಯವಾಗುವುದಿಲ್ಲ ಎಂದು ಆದೇಶಿಸಿದ ಸರ್ವೋಚ್ಚ ನ್ಯಾಯಾಲಯವು,ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಧೀಶರ ಪಟ್ಟಿಯನ್ನು,ಅವರು ಇತ್ಯರ್ಥಗೊಳಿಸಿರುವ ಮತ್ತು ಬಾಕಿಯಿರುವ ಪ್ರಕರಣಗಳ ಮಾಹಿತಿಯನ್ನು ಒದಗಿಸುವಂತೆಯೂ ಎಲ್ಲ ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್ ಗಳಿಗೆ ನಿರ್ದೇಶವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News