370ನೇ ವಿಧಿ ರದ್ದತಿಯ ಬಳಿಕ ಹೊರಗಿನ ಇಬ್ಬರು ಮಾತ್ರ ಜಮ್ಮು-ಕಾಶ್ಮೀರದಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ: ಕೇಂದ್ರ

Update: 2021-08-10 17:03 GMT
ಜಮ್ಮು-ಕಾಶ್ಮೀರ (ಸಾಂದರ್ಭಿಕ ಚಿತ್ರ)

ಹೊಸದಿಲ್ಲಿ,ಆ.10: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಹೊರಗಿನ ಇಬ್ಬರು ವ್ಯಕ್ತಿಗಳು ಮಾತ್ರ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು ಇತರ ರಾಜ್ಯಗಳ ಜನರು ಅಲ್ಲಿ ಜಮೀನು ಖರೀದಿಸಲು ಅವಕಾಶವನ್ನು ಕಲ್ಪಿಸಿದೆ.

ಜಮ್ಮು-ಕಾಶ್ಮೀರ ಆಡಳಿತವು ಒದಗಿಸಿರುವ ಮಾಹಿತಿಯಂತೆ 2019,ಆಗಸ್ಟ್ನಿಂದೀಚಿಗೆ ಹೊರಗಿನ ಇಬ್ಬರು ವ್ಯಕ್ತಿಗಳು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಎರಡು ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಆಸ್ತಿಗಳ ಖರೀದಿಯಿಂದ ಸರಕಾರಕ್ಕೆ ಮತ್ತು ಇತರ ರಾಜ್ಯಗಳ ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News