×
Ad

ಪೆಗಾಸಸ್ ವಿಷಯ ಚರ್ಚೆ ನಡೆಸಲು ಭಯವೇಕೆ ?: ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆ

Update: 2021-08-10 23:29 IST

ಹೊಸದಿಲ್ಲಿ, ಆ. 10: ರಾಜ್ಯಗಳು ಒಬಿಸಿ ಪಟ್ಟಿ ರೂಪಿಸುವ ರಾಜ್ಯಗಳ ಅಧಿಕಾರವನ್ನು ಮರು ಸ್ಥಾಪಿಸಲು ಕೋರುವ ಸಾಂವಿಧಾನಿಕ ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ಮಂಗಳವಾರ ಚರ್ಚೆ ನಡೆಯುತ್ತಿರುವ ಸಂದರ್ಭ ಪ್ರತಿಪಕ್ಷಗಳ ಸಂಸದರು ಪೆಗಾಸಸ್ ಬೇಹುಗಾರಿಕೆ ಕುರಿತು ಪ್ರಶ್ನೆ ಎತ್ತಿದ್ದಾರೆ. ‌

ಇಸ್ರೇಲ್, ಹಂಗೇರಿ ಹಾಗೂ ಫ್ರಾನ್ಸ್ನಂತಹ ದೇಶಗಳು ಬೇಹುಗಾರಿಕೆ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿವೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಈ ವಿಷಯದ ಕುರಿತು ಚರ್ಚೆ ನಡೆಸಲು ನರೇಂದ್ರ ಮೋದಿ ಸರಕಾರ ಭಯ ಪಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಮಸೂದೆಯ ಕುರಿತಂತೆ ಮಾತನಾಡಿ ಎಂದು ಚೌಧರಿಗೆೆ ಮತ್ತೆ ಮತ್ತೆ ಹೇಳಿದರು. 

ಅನಂತರ ಅಧೀರ್ ರಂಜನ್ ಚೌಧರಿ ಅವರು, ಪ್ರಸ್ತಾಪಿತ ಮಸೂದೆಯ ಬಗ್ಗೆ ಮಾತನಾಡಿದರು. ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂದ್ಯೋಪಾದ್ಯಾಯ ಅವರು ಪೆಗಾಸಸ್ ಬೇಹುಗಾರಿಕೆ ವಿಷಯದ ಕುರಿತು ಪ್ರಶ್ನೆ ಎತ್ತಿದರು ಹಾಗೂ ಈ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಚರ್ಚೆ ನಡೆಸಬೇಕು ಎಂಬ ಪ್ರಸ್ತಾವ ಮುಂದಿರಿಸಿದರು.
 
ರಾಜಕಾರಣಿಗಳು, ನ್ಯಾಯಾಧೀಶರು, ಉದ್ಯಮಿಗಳು ಹಾಗೂ ಪತ್ರಕರ್ತರು ಸೇರಿದಂತೆ ಹಲವು ಜನರ ಬೇಹುಗಾರಿಕೆ ಆರೋಪದ ಬಗ್ಗೆ ಉಲ್ಲೇಖಿಸಿದ ಚೌಧರಿ, ಕೆಲವು ದೇಶಗಳಲ್ಲಿ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದರು. 

‘‘ಇಲ್ಲಿ ಏನು ನಡೆಯುತ್ತಿದೆ ? ಪೆಗಾಸಸ್ ಬೇಹುಗಾರಿಕೆಯಂತಹ ಸಣ್ಣ ವಿಷಯದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಸಲು ನಾವು ಭಯಪಡುತ್ತಿದ್ದೇವೆ. ನಾವು ತನಿಖೆಯಿಂದ ದೂರ ಓಡುತ್ತಿದ್ದೇವೆ. ಈ ಸಮಸ್ಯೆ ಯಾಕೆ?’’ ಎಂದು ಅವರು ಪ್ರಶ್ನಿಸಿದರು. ಪೆಗಾಸಸ್ ಬೇಹುಗಾರಿಕೆ ಕುರಿತು ಚರ್ಚೆ ನಡೆಸುವಂತೆ ಧ್ವನಿ ಎತ್ತುತ್ತಿರುವ ಪ್ರತಿಪಕ್ಷಗಳು ಮತ್ತ ಮತ್ತೆ ಸದನದ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಇದರಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಜುಲೈ 19ರಂದು ಆರಂಭವಾದ ಮುಂಗಾರು ಅಧಿವೇಶನವನ್ನು ಮತ್ತೆ ಮತ್ತೆ ಮುಂದೂಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News