ಒಲಿಂಪಿಕ್ಸ್ ಪದಕ ವಿಜೇತರ ಸನ್ಮಾನ ಕಾರ್ಯಕ್ರಮದಲ್ಲಿ ರಾರಾಜಿಸಿದ್ದು ಪ್ರಧಾನಿ ಮೋದಿ ಚಿತ್ರ, ವಿಜೇತರದ್ದಲ್ಲ !

Update: 2021-08-11 08:10 GMT
to: screengrab DD news

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನಿಸಲು ಭಾರತ ಸರಕಾರ ಆಯೋಜಿಸಿದ್ದ ಅಧಿಕೃತ ಸಮಾರಂಭವು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿನ ಪ್ರಚಾರ ಕಾರ್ಯಕ್ರಮದಂತೆ ತೋರಿದೆ ಎಂದು ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾರ್ಯಕ್ರಮದ ವೇದಿಕೆಯ ಹಿನ್ನೆಲೆಯಲ್ಲಿ ವಿಜೇತರನ್ನು ಅಭಿನಂದಿಸುವ ದೊಡ್ಡ ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ ನಲ್ಲಿ ಪ್ರಧಾನಿಯ ಚಿತ್ರ ಅತಿ ದೊಡ್ಡದಾಗಿ ಬಿಂಬಿತವಾಗಿದ್ದರೆ ವಿಜೇತರ ಚಿತ್ರಗಳನ್ನು ಇನ್ನೊಂದು ಕಡೆಯಲ್ಲಿ ಬಹಳ ಚಿಕ್ಕದಾಗಿ ಪ್ರದರ್ಶಿಸಲಾಗಿತ್ತು.

ಈ ಬ್ಯಾನರ್ ನೋಡಿದರೆ, ಮೋದಿ ಅವರೇ ಒಲಿಂಪಿಕ್ ಪದಕಗಳನ್ನು ಗೆದ್ದು ಬಂದಿದ್ದಾರೆಂದು ತೋರುತ್ತದೆ ಎಂದು ಹಲವು ಟ್ವಿಟ್ಟರಿಗರು ವ್ಯಂಗ್ಯವಾಡಿದ್ದಾರೆ.

"ಈ ಒಲಿಂಪಿಕ್ ಆಟಗಾರರು ಭಾರತಕ್ಕಾಗಿ ಆಡುತ್ತಿದ್ದರೆ ಮೋದೀ ಜಿ ಅವರು ಭಾರತದೊಂದಿಗೆ ಆಟವಾಡುತ್ತಿದ್ದಾರೆ" ಎಂದು ಕಾಜಲ್ ಬಾರಿಕ್ ಎಂಬವರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

"ಭಾರತದಷ್ಟೇ ಜನಸಂಖ್ಯೆ ಹೊಂದಿರುವ ಹಾಗೂ 38 ಚಿನ್ನ ಸಹಿತ 88 ಪದಕಗಳನ್ನು ಗೆದ್ದಿರುವ ಚೀನಾ ಕೂಡ ತನ್ನ ಅಧಿನಾಯಕನನ್ನು ಓಲೈಸಲು ಈ ರೀತಿ ಮಾಡುವುದಿಲ್ಲ," ಎಂದು ಜಾಯ್ ಎಂಬವರು ಬರೆದಿದ್ದಾರೆ.

"ಸ್ವಾಗತ ಪೋಸ್ಟರಿನಲ್ಲಿ  ಒಲಿಂಪಿಕ್ ಪದಕ ವಿಜೇತರನ್ನು ಗುರುತಿಸಿ, ಪ್ರಾಯಶಃ ಹೀಗೆ ಮಾಡಲು ನೆರೆಮನೆಯವರಿಂದ ಕನ್ನಡಕವನ್ನು ಎರವಲು ಪಡೆಯಬೇಕಾದೀತು" ಎಂದು ಸೂರ್ಯ ಪ್ರತಾಪ್ ಸಿಂಗ್ ಎಂಬವರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಮೋದಿ ಸರಕಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣಗೊಳಿಸಿದ ಸಂದರ್ಭ ಹಲವರು ಪ್ರಧಾನಿಗೆ ಅವರ ಹೆಸರನ್ನು ನೀಡಲಾಗಿರುವ ಗುಜರಾತ್‍ನ ಅಹ್ಮದಾಬಾದ್‍ನಲ್ಲಿರುವ ಜಗತ್ತಿನ ಅತಿ ದೊಡ್ಡ ಸ್ಟೇಡಿಯಂ ಕುರಿತು ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News