×
Ad

ತಡೆಯಾಜ್ಞೆಯಿದ್ದರೂ ಶಿವ ಪ್ರತಿಮೆ ಅನಾವರಣ: ಪ್ರಕರಣಕ್ಕೆ ಕೋಮು ಬಣ್ಣ ನೀಡಿದ ಹಿಂದುತ್ವ ಸಂಘಟನೆಗಳು

Update: 2021-08-11 19:20 IST
Photo: Thenewsminute.com

ಬೆಂಗಳೂರು: ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆಯ ಹೊರತಾಗಿಯೂ  ಬೆಂಗಳೂರಿನ ಅತ್ಯಂತ ಹಳೆಯ ಕೆರೆಗಳಲ್ಲೊಂದಾದ ಬೇಗೂರು ಕೆರೆಯ ನಡುವೆ ಸೃಷ್ಟಿಸಲಾದ ಕೃತಕ ದ್ವೀಪದಲ್ಲಿ ನಿರ್ಮಿಸಲಾಗಿರುವ ಶಿವನ ಪ್ರತಿಮೆಯನ್ನು ಕಳೆದ ವಾರ ಬಲಪಂಥೀಯ ಸಂಘಟನೆಗಳು ಅನಾವರಣಗೊಳಿಸಿವೆ ಎಂದು Thenewsminute.com ವರದಿ ಮಾಡಿದೆ.

ಈ ಕೆರೆಯಲ್ಲಿ ಕೃತಕ ದ್ವೀಪ ಸೃಷ್ಟಿಸುವ ಅಧಿಕಾರ ಬಿಬಿಎಂಪಿಗೆ ಇಲ್ಲದೇ ಇರುವುದರಿಂದ ಅಲ್ಲಿ ಪ್ರತಿಮೆ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಆಗಸ್ಟ್ 2019ರಲ್ಲಿ ನೀಡಿದ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಹೇಳಿತ್ತು. ಸಿಟಿಜನ್ಸ್ ಆ್ಯಕ್ಷನ್ ಗ್ರೂಪ್ ಈ ಪ್ರತಿಮೆ ಸ್ಥಾಪನೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು.

ಆದರೆ ಕಳೆದೆರಡು ವಾರಗಳಿಂದ ಹಿಂದುತ್ವ ಸಂಘಟನೆಗಳು ಪ್ರತಿಮೆ ಸ್ಥಾಪನೆ ವಿರುದ್ಧ ಹೈಕೋರ್ಟ್ ತಡೆಯಾಜ್ಞೆಯನ್ನು ಪ್ರಶ್ನಿಸಿ ಪೋಸ್ಟರುಗಳನ್ನು ಹಾಗೂ ವೀಡಿಯೋಗಳನ್ನು ಹರಿದಾಡಿಸಿದ್ದವಲ್ಲದೆ ಕ್ರೈಸ್ತ ಸಮುದಾಯದ ವಿರೋಧದಿಂದ ಇಂತಹ ಒಂದು ಅಡ್ಡಿ ಎದುರಾಗಿದೆ ಎಂಬಂತೆಯೂ ಬಿಂಬಿಸಿದ್ದವು.

ಆದರೆ ಕಳೆದ ವಾರ ಪ್ರತಿಮೆಯನ್ನು ಅನಾವರಣಗೊಳಿಸಿ  ಅಲ್ಲಿ ಕೇಸರಿ ಧ್ವಜಗಳನ್ನೂ ಹಾರಿಸಲಾಗಿದೆ.

ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಎಂಬಾತ ಜುಲೈ 31ರಂದು ಚಿತ್ರೀಕರಿಸಲಾಗಿರುವ ವೀಡಿಯೋದಲ್ಲಿ ಆತ ಪ್ರತಿಮೆಯ ಮುಂದೆ ನಿಂತುಕೊಂಡು ಹಿಂದುಗಳು ಜತೆಗೂಡಬೇಕು, ಯಾರೂ  ಏಕೆ ಪ್ರಶ್ನಿಸುತ್ತಿಲ್ಲ. ಈ ಕೆರೆಯ ಮಧ್ಯದಲ್ಲಿ ಶಿವನ ಪ್ರತಿಮೆ  ಅನಾವರಣಗೊಳಿಸಿದರೆ ಕ್ರೈಸ್ತರ ಭಾವನೆಗಳಿಗೆ ನೋವುಂಟಾಗುತ್ತದೆ ಎಂದು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗಿದ್ದರು. ಇದೇನು ಇಟಲಿಯೇ ಅಥವಾ ಅರಬ್ ರಾಷ್ಟ್ರವೇ?" ಎಂದು ಪ್ರಶ್ನಿಸಿದ್ದ. ಆದರೆ ಈ ವೀಡಿಯೋದಲ್ಲಿ ಪ್ರತಿಮೆಯನ್ನು ಟಾರ್ಪಾಲಿನ್ ಶೀಟ್‍ಗಳಿಂದ ಮುಚ್ಚಲಾಗಿರುವುದು ಕಾಣಿಸುತ್ತದೆ.

ನಕಲಿ ಸುದ್ದಿಗಳಿಗೆ ಕುಖ್ಯಾತಿ ಪಡೆದಿರುವ ಪೋಸ್ಟ್ ಕಾರ್ಡ್ ನ್ಯೂಸ್ ತನ್ನ ಒಂದು ಪೋಸ್ಟ್‍ನಲ್ಲಿ ಪ್ರತಿಮೆಗೆ ಟಾರ್ಪಾಲಿನ್ ಶೀಟ್ ಹಾಕಿರುವ ಒಂದು ಚಿತ್ರ ಹಾಗೂ ಟಾರ್ಪಾಲಿನ್ ಶೀಟ್‍ಗಳನ್ನು ತೆಗೆದ ಚಿತ್ರ ಪೋಸ್ಟ್ ಮಾಡಿ, ಹಿಂದು ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದ ಶಿವನ ವಿಗ್ರಹವನ್ನು ಬಂಧನಮುಕ್ತಗೊಳಿಸಿ ಭಗವಧ್ವಜ ಹಾರಿಸಿದ್ದಾರೆ ಎಂದು ಬರೆದಿದೆ.

ಕೃಪೆ: Thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News