ಕೇರಳ: ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ಆಯೋಗದ ತನಿಖೆಗೆ ಹೈಕೋರ್ಟ್ ತಡೆ

Update: 2021-08-11 16:52 GMT

ತಿರುವನಂತಪುರ, ಆ. 11: ಚಿನ್ನ ಹಾಗೂ ಡಾಲರ್ ಕಳ್ಳ ಸಾಗಾಟ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಕೆ. ಮೋಹನನ್ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ರಚಿಸಲು ನಿರ್ದೇಶಿಸಲಾದ ನೋಟಿಸ್ ಗೆ ಕೇರಳ ಉಚ್ಚ ನ್ಯಾಯಾಲಯ ಬುಧವಾರ ತಡೆ ನೀಡಿದೆ. ಇದು ಪಿಣರಾಯಿ ವಿಜಯನ್ ಅವರ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಿ.ಬಿ. ಸುರೇಶ್ ಕುಮಾರ್ ಅವರು ಮಧ್ಯಂತರ ಆದೇಶ ಜಾರಿ ಮಾಡಿದರು. ನ್ಯಾಯಾಲಯ ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತು ಹಾಗೂ ರಾಜ್ಯ ಸರಕಾರ, ಇತರರಿಗೆ ನೋಟಿಸು ಜಾರಿ ಮಾಡಿತು.

ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಗಳಾದ ಕೆ.ಎಂ. ನಾಗರಾಜ್ ಹಾಗೂ ಎಸ್.ವಿ. ರಾಜು, ಉಪ ಸಾಲಿಸಿಟರ್ ಜನರಲ್ ಪಿ. ವಿಜಯಕುಮಾರ್ ಹಾಗೂ ವಿಶೇಷ ಪ್ರಾಸಿಕ್ಯೂಟರ್ ಟಿ.ಎ. ಉಣ್ಣಿಕೃಷ್ಣನ್ ಹಾಜರಾಗಿದ್ದರು.

ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಇತರ ಸರಕಾರಿ ಅಧಿಕಾರಿಗಳ ವಿರುದ್ಧ ಆರೋಪ ರೂಪಿಸಲು ಪಿತೂರಿ ನಡೆದಿತ್ತೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಸೂಚನೆ ಆಯೋಗಕ್ಕೆ ಸೂಚಿಸಿತ್ತು.

ಕಸ್ಟಮ್ಸ್ ಹಾಗೂ ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸಂಸ್ಥೆಗಳು ಆಡಳಿತಾರೂಢ ರಾಜಕೀಯ ಪಕ್ಷಗಳನ್ನು ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಾಗಿ ಸಿಲುಕಿಸುತ್ತಿವೆ. ಕೇಂದ್ರ ತನಿಖಾ ಸಂಸ್ಥೆಗಳ ಈ ಕ್ರಮಗಳು ತನಿಖೆ ನಡೆಸುವುದರಲ್ಲಿ ಅವರಲ್ಲಿ ವೃತ್ತಿಪರತೆ ಇಲ್ಲದೇ ಇರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು.

ಕೇರಳದ ಗೃಹ ಖಾತೆಯನ್ನು ಕೂಡ ಹೊಂದಿರುವ ಮುಖ್ಯಮಂತ್ರಿ ಅವರು ತಮ್ಮ ಅಧಿಕಾರವವನ್ನು ದುರುಪಯೋಗ ಮಾಡಿಕೊಂಡು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಮನವಿಯಲ್ಲಿ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News