ಲಸಿಕೆ ಪಡೆಯದವರಿಗೆ ಉದ್ಯೋಗ ನಿರಾಕರಿಸುವುದು ವ್ಯಕ್ತಿ ಸ್ವಾತಂತ್ರ್ಯದ ಹರಣ: ಮಣಿಪುರ ಹೈಕೋರ್ಟ್
ಹೊಸದಿಲ್ಲಿ: ಉದ್ಯೋಗ ಮತ್ತು ಕೋವಿಡ್-19 ಲಸಿಕೆಯನ್ನು ಜೋಡಿಸಿ ಜನರಿಗೆ ಜೀವನೋಪಾಯವನ್ನು ನಿರಾಕರಿಸುವುದು ಅಕ್ರಮ ಎಂದು ಮಣಿಪುರ ಹೈಕೋರ್ಟ್ ಹೇಳಿದೆ.
ಕೋವಿಡ್ ಲಸಿಕೆ ಪಡೆಯದೇ ಇರುವವರಿಗೆ ಉದ್ಯೋಗ ನಿರಾಕರಿಸುವುದು ವ್ಯಕ್ತಿಯ ಸ್ವಾತಂತ್ರ್ಯದ ಹರಣವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ನೋಬಿನ್ ಸಿಂಗ್ ಅವರ ಪೀಠ ಹೇಳಿದೆ.
ಉದ್ಯೋಗಿಗಳು ಲಸಿಕೆ ಪಡೆದಿದ್ದಲ್ಲಿ ಅಂತಹ ಸಂಘಸಂಸ್ಥೆಗಳು, ಫ್ಯಾಕ್ಟರಿಗಳು ಹಾಗೂ ಅಂಗಡಿಗಳನ್ನು ತೆರೆಯಲು ಅನುಮತಿಸಲು ಆದ್ಯತೆ ನೀಡುವ ಮಣಿಪುರ ಗೃಹ ಇಲಾಖೆಯ ಅಧ್ಯಾದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯ ಮೇಲೆ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ. ಸರಕಾರಿ ಮತ್ತು ಖಾಸಗಿ ಯೋಜನೆಗಳು ಹಾಗೂ ಮನ್‍ರೇಗಾ ಉದ್ಯೋಗ ಕಾರ್ಡ್ ಹೊಂದಿರುವವರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಮಣಿಪುರ ಸರಕಾರ ಹೇಳಿತ್ತು.
ರಾಜ್ಯ ಸರಕಾರದ ಅಧಿಸೂಚನೆಯನ್ನು ಮುಂದಿನ ವಿಚಾರಣೆ ತನಕ ಬದಿಗಿರಿಸಿರುವ ನ್ಯಾಯಾಲಯ, ರಾಜ್ಯ ಸರಕಾರದ ಉತ್ತರವನ್ನು ಕೇಳಿದೆ.