ಅಫ್ಘಾನ್ ಅವ್ಯವಸ್ಥೆ ಸರಿಪಡಿಸಲು ಮಾತ್ರ ಅಮೆರಿಕಕ್ಕೆ ಪಾಕ್ ಬೇಕು: ಇಮ್ರಾನ್ ಖಾನ್
ಇಸ್ಲಾಮಾಬಾದ್ (ಪಾಕಿಸ್ತಾನ), ಆ. 12: ಇಪ್ಪತ್ತು ವರ್ಷಗಳ ಯುದ್ಧದ ಬಳಿಕ ಅಫ್ಘಾನಿಸ್ತಾನದಲ್ಲಿ ತಾನು ಬಿಟ್ಟು ಹೋಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಮಾತ್ರ ಪಾಕಿಸ್ತಾನ ಉಪಯುಕ್ತ ಎಂಬುದಾಗಿ ಅಮೆರಿಕ ಭಾವಿಸುತ್ತದೆ ಹಾಗೂ ರಕ್ಷಣಾ ಭಾಗೀದಾರಿಕೆಯ ವಿಷಯ ಬಂದಾಗ ಅದು ಭಾರತಕ್ಕೆ ಆದ್ಯತೆ ನೀಡುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನು ಆಗಸ್ಟ್ 31ರೊಳಗೆ ಹಿಂದಕ್ಕೆ ಪಡೆದುಕೊಳ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಬಳಿಕ, ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನ ಆಕ್ರಮಣವನ್ನು ಹೆಚ್ಚಿಸಿದೆ.
‘‘ಅಫ್ಘಾನಿಸ್ತಾನದಲ್ಲಿ ಸೇನಾ ಪರಿಹಾರ ಸಾಧ್ಯವಿಲ್ಲದಿದ್ದರೂ, ಅದಕ್ಕಾಗಿ ಅಮೆರಿಕ ಅಲ್ಲಿ 20 ವರ್ಷಗಳ ಯುದ್ಧ ಮಾಡಿತು. ಅದರಿಂದಾಗಿ ಸೃಷ್ಟಿಯಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಮಾತ್ರ ಪಾಕಿಸ್ತಾನ ಉಪಯುಕ್ತ ಎಂಬುದಾಗಿ ಪರಿಗಣಿಸಲಾಗುತ್ತಿದೆ’’ ಎಂದು ಇಸ್ಲಾಮಾಬಾದ್ನಲ್ಲಿರುವ ತನ್ನ ನಿವಾಸದಲ್ಲಿ ಬುಧವಾರ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಇಮ್ರಾನ್ ಖಾನ್ ಹೇಳಿದರು.
ಭಾರತದೊಂದಿಗೆ ರಕ್ಷಣಾ ಭಾಗೀದಾರಿಕೆ ಹೊಂದಲು ಅಮೆರಿಕ ನಿರ್ಧರಿಸಿರುವುದರಿಂದ ಅದು ಪಾಕಿಸ್ತಾನವನ್ನು ಭಿನ್ನವಾಗಿ ಕಾಣುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದರು ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪತ್ರಕರ್ತರೊಬ್ಬರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಬೈಡನ್ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದಂದಿನಿಂದ ಇಮ್ರಾನ್ ಖಾನ್ ಜೊತೆ ಮಾತನಾಡಿಲ್ಲ. ಈ ವಿಷಯದಲ್ಲಿ ಪಾಕಿಸ್ತಾನಕ್ಕೆ ಅತೃಪ್ತಿ ಇದೆ.