ಕ್ರಿಮಿನಲ್ ಆರೋಪದ ವಿಚಾರಣೆ: ಮಾಜಿ ಅಧ್ಯಕ್ಷ ಬಶೀರ್‌ರನ್ನು ಐಸಿಸಿಗೆ ಹಸ್ತಾಂತರಿಸಲು ಸುಡಾನ್ ತೀರ್ಮಾನ

Update: 2021-08-12 14:25 GMT

 ಖರ್‌ಟೋಮ್, ಆ.12: ಜನಾಂಗ ಹತ್ಯೆ, ಯುದ್ಧಾಪರಾಧ, ಮಾನವತೆಯ ವಿರುದ್ಧದ ಅಪರಾಧ ಮುಂತಾದ ಆರೋಪ ಎದುರಿಸುತ್ತಿರುವ ಸುಡಾನ್‌ನ ಮಾಜಿ ಅಧ್ಯಕ್ಷ ಉಮರ್ ಅಲ್ ಬಶೀರ್ ಹಾಗೂ ಇತರ ಇಬ್ಬರು ಅಧಿಕಾರಿಗಳನ್ನು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ಗೆ ಹಸ್ತಾಂತರಿಸುವುದಾಗಿ ಸುಡಾನ್ ಹೇಳಿದೆ.

   ಬಶೀರ್ 1989ರಿಂದ 2019ರ ವರೆಗೆ ಸುಡಾನ್‌ನಲ್ಲಿ ಅಧಿಕಾರ ನಡೆಸಿದ್ದರು. 2003ರಲ್ಲಿ ಪಶ್ಚಿಮ ಪ್ರಾಂತ್ಯದ ದಾರ್ಫುರ್‌ನಲ್ಲಿ ಸಂಭವಿಸಿದ ಘರ್ಷಣೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು 2.5 ಮಿಲಿಯನ್ ಜನತೆ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

 ಐಸಿಸಿಯ ‘ವಾಂಟೆಡ್’ ಪಟ್ಟಿಯಲ್ಲಿರುವ ಸುಡಾನ್‌ನ ಅಧಿಕಾರಿಗಳನ್ನು ಹಸ್ತಾಂತರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವಿದೇಶ ಸಚಿವ ಮರಿಯಮ್ ಅಲ್ ಮಹ್ದಿ ಹೇಳಿರುವುದಾಗಿ ಸರಕಾರಿ ಸುದ್ಧಿಮಾಧ್ಯಮ ‘ಸುನಾ’ ವರದಿ ಮಾಡಿದೆ. ಐಸಿಸಿಯ ಮುಖ್ಯ ಅಭಿಯೋಜಕ ಕರೀಮ್ ಖಾನ್ ಅವರು ಸುಡಾನ್‌ಗೆ ಭೇಟಿ ನೀಡಿದ್ದ ಸಂದರ್ಭ ಅಪರಾಧಿಗಳ ಹಸ್ತಾಂತರದ ನಿರ್ಧಾರಕ್ಕೆ ಬರಲಾಗಿದೆ. ಆದರೆ ಸಂಪುಟದ ಈ ನಿರ್ಧಾರಕ್ಕೆ ಸುಡಾನ್‌ನ ಆಡಳಿತ ನಿರ್ವಹಿಸುತ್ತಿರುವ ಉನ್ನತ ಸಮಿತಿಯ ಅನುಮೋದನೆ ಅಗತ್ಯವಿದೆ. ಸೇನಾಪಡೆಯ ಅಧಿಕಾರಿಗಳು ಹಾಗೂ ನಾಗರಿಕ ಮುಖಂಡರ ಸಮಿತಿ ಇದಾಗಿದೆ. ‌

ಬುಧವಾರ ಸಮಿತಿಯ ಅಧ್ಯಕ್ಷ ಜನರಲ್ ಅಬ್ದೆಲ್ ಫತಾಹ್ ಅಲ್ ಬರ್ಹಾನ್, ಉಪಾಧ್ಯಕ್ಷ ಮುಹಮ್ಮದ್ ಹಮ್ದಮ್ ಡಾಗ್ಲೋರನ್ನು ಕರೀಮ್ ಭೇಟಿಯಾಗಿದ್ದರು. ಐಸಿಸಿಯೊಂದಿಗೆ ಸಹಕರಿಸಲು ಸುಡಾನ್ ಸಿದ್ಧವಾಗಿದೆ ಎಂದು ಡಾಗ್ಲೋ ಬಳಿಕ ಪ್ರತಿಕ್ರಿಯಿಸಿದ್ದರು. ಅಂತರಾಷ್ಟ್ರೀಯ ಬದ್ಧತೆಯ ನಿಟ್ಟಿನಲ್ಲಿ ಮಾತ್ರವಲ್ಲ, ಜನತೆಯ ಆಗ್ರಹಕ್ಕೂ ಕಿವಿಗೊಟ್ಟು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸುಡಾನ್ ಪ್ರಧಾನಿ ಅಬ್ದಲ್ಲಾ ಹಮ್ದಾಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News