ಪೆಗಾಸಸ್: ಕಣ್ಗಾವಲು ತಂತ್ರಜ್ಞಾನದ ಮಾರಾಟವನ್ನು ಸದ್ಯ ನಿಲ್ಲಿಸಲು ವಿಶ್ವಸಂಸ್ಥೆ ಮಾನವಹಕ್ಕು ತಜ್ಞರ ಕರೆ

Update: 2021-08-12 15:44 GMT
ಸಾಂದರ್ಭಕ ಚಿತ್ರ

ಹೊಸದಿಲ್ಲಿ,ಆ.12: ವಿಶ್ವಾದ್ಯಂತ ಕಣ್ಗಾವಲು ತಂತ್ರಜ್ಞಾನದ ಮಾರಾಟ ಮತ್ತು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಗುರುವಾರ ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ. ಭಾರತ ಸೇರಿದಂತೆ ವಿಶ್ವಾದ್ಯಂತ ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರ ಮೇಲೆ ನಿಗಾ ಇರಿಸಲು ಇಸ್ರೇಲ್ ನಿರ್ಮಿತ ಪೆಗಾಸಸ್ ಸ್ಪೈವೇರ್‌ನ್ನು ಬಳಸಲಾಗಿತ್ತು ಎಂಬ ಆರೋಪಗಳ ನಡುವೆಯೇ ತಜ್ಞರು ಈ ಕರೆಯನ್ನು ನೀಡಿದ್ದಾರೆ.

ಕಣ್ಗಾವಲು ತಂತ್ರಜ್ಞಾನ ಮತ್ತು ವ್ಯಾಪಾರ ಕೇತ್ರವನ್ನು ಮಾನವ ಹಕ್ಕು ಮುಕ್ತ ವಲಯವಾಗಿ ಕಾರ್ಯಾಚರಿಸಲು ಅವಕಾಶ ನೀಡುವುದು ಅತ್ಯಂತ ಅಪಾಯಕಾರಿಯಾಗಿದೆ ಮತ್ತು ಬೇಜವಾಬ್ದಾರಿತನವಾಗಿದೆ ಎಂದು ಈ ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂತಹ ಪರಿಪಾಠಗಳು ಅಭಿವ್ಯಕ್ತಿ ಸ್ವಾತಂತ್ರ,ಖಾಸಗಿತನ ಮತ್ತು ಸ್ವಾತಂತ್ರದ ಹಕ್ಕುಗಳನ್ನು ಉಲ್ಲಂಘಿಸುವುದರ ಜೊತೆಗೆ ಜೀವಗಳನ್ನು ಅಪಾಯಕ್ಕೆ ತಳ್ಳುತ್ತವೆ,ಪತ್ರಿಕಾ ಸ್ವಾತಂತ್ರಕ್ಕೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ ಎಂದು ಹೇಳಿಕೆಯು ಕಳವಳವನ್ನು ವ್ಯಕ್ತಪಡಿಸಿದೆ.
 
ಮಾನವ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವವರೆಗೆ ಇಂತಹ ತಂತ್ರಜ್ಞಾನಗಳ ಮಾರಾಟ ಮತ್ತು ವರ್ಗಾವಣೆಯನ್ನು ನಿಷೇಧಿಸಬೇಕು ಎಂದು ಹೇಳಿರುವ ತಜ್ಞರು,ಎಲ್ಲ ದೇಶಗಳು ತಮ್ಮ ಪ್ರಜೆಗಳನ್ನು ಕಾನೂನುಬಾಹಿರ ಕಣ್ಗಾವಲು,ಅವರ ಖಾಸಗಿತನದ ಆಕ್ರಮಣ,ಅವರ ಅಭಿವ್ಯಕ್ತಿ ಸ್ವಾತಂತ್ರ,ಸಮಾವೇಶಗೊಳ್ಳುವಿಕೆಯ ಸ್ವಾತಂತ್ರಕ್ಕೆ ಬೆದರಿಕೆಗಳಿಂದ ರಕ್ಷಿಸಲು ದೃಢವಾದ ದೇಶಿಯ ಕಾನೂನುಗಳನ್ನು ಹೊಂದಿರುವುದನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಅಗತ್ಯವಾಗಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News