ಯುಎಇ ದೂತವಾಸ ಕಚೇರಿ ಮೂಲಕ ಪಿಣರಾಯಿ ವಿಜಯನ್ ಹಣ ರವಾನೆ: ಕಸ್ಟಮ್ಸ್ ಇಲಾಖೆ

Update: 2021-08-12 17:09 GMT

ಲಕ್ನೋ, ಆ. 12: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2017ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇಎ)ಗೆ ಭೇಟಿ ನೀಡಿದಾಗ ತಿರುವನಂತಪುರದಲ್ಲಿರುವ ಯುಎಇಯ ದೂತವಾಸ ಕಚೇರಿಯ ಅಧಿಕಾರಿಗಳ ಮೂಲಕ ಯುಎಇಗೆ ಹಣ ರವಾನಿಸಿದ್ದಾರೆ ಎಂದು ಕೇರಳ ಚಿನ್ನ ಕಳ್ಳ ಸಾಗಾಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಆರೋಪಿಸಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ಹೇಳಿದೆ.

ಕೇರಳ ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಜುಲೈ 29ರಂದು 6 ಮಂದಿಗೆ ನೋಟಿಸು ಜಾರಿ ಮಾಡಲಾಗಿದ್ದು, ಇವರಲ್ಲಿ ಯುಎಇ ದೂತವಾಸ ಕಚೇರಿಯ ಮಾಜಿ ಉದ್ಯೋಗಿಗಳಾದ ಸರಿತಾ ಪಿ.ಎಸ್ ಹಾಗೂ ಸ್ವಪ್ನಾ ಸುರೇಶ್ ಈ ಆರೋಪ ಮಾಡಿದ್ದಾರೆ. 2019 ಆಗಸ್ಟ್ನಲ್ಲಿ ಚಿನ್ನ ಕಳ್ಳ ಸಾಗಾಟ ಪ್ರಕರಣದ ತನಿಖೆ ನಡೆಸುತ್ತಿರುವಾಗ, ತಿರುವನಂತಪುರದಲ್ಲಿರುವ ದೂತವಾಸ ಕಚೇರಿಯ ಮಾಜಿ ಹಣಕಾಸು ವಿಭಾಗದ ಮುಖ್ಯಸ್ಥ ಖಾಲಿದ್ ಮುಹಮ್ಮದ್ ಅಲ್ ಶೌಕ್ರಿ ಅವರ ಮೂಲಕ 1.41 ಕೋಟಿಗೂ ಅಧಿಕ ಹಣವನ್ನು ಕಾನೂನು ಬಾಹಿರವಾಗಿ ರವಾನಿಸಲಾತ್ತು ಎಂಬುದನ್ನು ಕಸ್ಟಮ್ಸ್ ಇಲಾಖೆ ಪತ್ತೆ ಹಚ್ಚಿತ್ತು. 

ಶೌಕ್ರಿ, ಸುರೇಶ್, ಸರಿತಾ ಹಾಗೂ ಇತರ ಮೂವರಿಗೆ ಶೋಕಾಸ್ ನೋಟಿಸು ಜಾರಿ ಮಾಡಲಾಗಿದೆ. ಒಂದು ತಿಂಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. 2017ರಲ್ಲಿ ಪಿಣರಾಯಿ ವಿಜಯನ್ ಯುಎಇಗೆ ಅಧಿಕೃತ ಭೇಟಿಗೆ ತೆರಳಿದ ಒಂದು ದಿನದ ಬಳಿಕ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರು ತನ್ನನ್ನು ಸಂಪರ್ಕಿಸಿ ಪ್ಯಾಕೇಜ್ ಅನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸುವಂತೆ ಹೇಳಿದ್ದರು ಎಂದು ಸುರೇಶ್ ಹೇಳಿರುವುದನ್ನು ಉಲ್ಲೇಖಿಸಿ ಕಸ್ಟಮ್ಸ್ ಇಲಾಖೆ ತಿಳಿಸಿದೆ. 

ಸುರೇಶ್ ತಿರುವನಂತಪುರದಲ್ಲಿರುವ ಯುಎಇಯ ಕಾನ್ಸುಲ್ ಜನರಲ್ ಅವರನ್ನು ಸಂಪರ್ಕಿಸಿದರು ಹಾಗೂ ಪ್ಯಾಕೇಜ್ ಅನ್ನು ಸಾಗಾಟ ಮಾಡಲು ವ್ಯವಸ್ಥೆ ಮಾಡಿದರು ಎಂದು ಕಸ್ಟಮ್ಸ್ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News