ನಕಲಿ ಪ್ರಕರಣ ದಾಖಲಿಸಿ ರೈತ ಪ್ರತಿಭಟನಾಕಾರರನ್ನು ತಡೆಯಲು ಅಸಾಧ್ಯ: ರಾಕೇಶ್ ಟಿಕಾಯತ್

Update: 2021-08-13 17:43 GMT

ಹೊಸದಿಲ್ಲಿ, ಆ. 13: ತನ್ನ ರಾಜಕೀಯ ಗುರುಗಳನ್ನು ಸಮಾಧಾನಪಡಿಸಲು ಹರ್ಯಾಣ ಸರಕಾರ ರೈತರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ಗುರುವಾರ ಆರೋಪಿಸಿದ್ದಾರೆ. 

ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ ಹಾಗೂ ಪೊಲೀಸ್ ಪ್ರಕರಣಗಳು ಪ್ರತಿಭಟನೆಕಾರರನ್ನು ತಡೆಯಲಾರದು ಎಂದು ಟಿಕಾಯತ್ ಹೇಳಿದ್ದಾರೆ. ರೈತ ಪ್ರತಿಭಟನೆ ಸಂದರ್ಭ ಹರ್ಯಾಣದ ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರ ಕಾರಿನ ಮೇಲೆ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿ ಹರ್ಯಾಣ ಪೊಲೀಸರು ಜುಲೈ 15ರಂದು 100ಕ್ಕೂ ಅಧಿಕ ಜನರ ಮೇಲೆ ದೇಶದ್ರೋಹ, ಹತ್ಯೆ ಯತ್ನ ಹಾಗೂ ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾದ ಹೆಸರುಗಳಲ್ಲಿ ರೈತ ನಾಯಕರಾದ ಹರ್ಚರಣ್ ಸಿಂಗ್ ಹಾಗೂ ಪ್ರಹ್ಲಾದ್ ಸಿಂಗ್ ಅವರ ಹೆಸರು ಕೂಡ ಇದೆ. ಹರ್ಯಾಣದ ಕುರುಕ್ಷೇತ್ರ ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಟಿಕಾಯತ್, ಕಾರ್ಪೋರೇಟ್ ಪರವಾಗಿರುವ ಕೇಂದ್ರ ಸರಕಾರದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರಕಾರ ನಮ್ಮ ಧ್ವನಿಯನ್ನು ಆಲಿಸಲು ನಿರಾಕರಿಸುತ್ತಿದೆ ಎಂದರು. ಈ ನಡುವೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ಗುರುನಾಮ್ ಸಿಂಗ್ ಚುರಾನಿ ನಡುವಿನ ಭಿನ್ನಾಭಿಪ್ರಾಯವನ್ನು ನಿರಾಕರಿಸಿರುವ ಟಿಕಾಯತ್, ಅವರು ನಮ್ಮಾಂದಿಗಿದ್ದಾರೆ ಹಾಗೂ ನಾವು ಸಂಘಟಿತರಾಗಿ ಹೋರಾಟ ಮಾಡಲಿದ್ದೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News