×
Ad

ಅವಧಿಗೆ ಮುಂಚೆಯೇ ನಿವೃತ್ತರಾಗಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ರಿಂದ ಆದಿತ್ಯನಾಥ್‌ ವಿರುದ್ಧ ಸ್ಫರ್ಧೆ

Update: 2021-08-14 16:39 IST

ಲಕ್ನೋ: ಅವಧಿಪೂರ್ವ ನಿವೃತ್ತರಾಗುವಂತೆ ಮಾಡಲಾಗಿದ್ದ ಉತ್ತರ ಪ್ರದೇಶ ಕೇಡರ್‍ನ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆಂದು ಅವರ ಕುಟುಂಬ ತಿಳಿಸಿದೆ.

ಇದು ಠಾಕೂರ್ ಅವರಿಗೆ ತತ್ವಗಳ ಆಧಾರದ ಹೋರಾಟವಾಗಿದೆ ಎಂದು ಅವರ ಪತ್ನಿ ನೂತನ್ ಹೇಳಿದ್ದಾರೆ.

ʼಆದಿತ್ಯನಾಥ್ ಅವರು ಹಲವಾರು ಅಪ್ರಜಾಸತ್ತಾತ್ಮಕ,  ಕಿರುಕುಳ ನೀಡುವ ಮತ್ತು ತಾರತಮ್ಯಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ, ಆದುದರಿಂದ ಅಮಿತಾಭ್ ಠಾಕೂರ್ ಅವರು ಯೋಗಿ ಆದಿತ್ಯನಾಥ್ ಎಲ್ಲಿಂದ ಕಣಕ್ಕಿಳಿಯುತ್ತಾರೋ ಅಲ್ಲಿಂದಲೇ ಸ್ಪರ್ಧಿಸಲಿದ್ದಾರೆ" ಎಂದು ನೂತನ್ ಹೇಳಿದರು.

ಅಮಿತಾಭ್ ಅವರನ್ನು ಮಾರ್ಚ್ 23ರಂದು ಸಾರ್ವಜನಿಕ ಹಿತದೃಷ್ಟಿಯ ಕಾರಣ ಮುಂದಿಟ್ಟು ಕೇಂದ್ರ ಗೃಹ ಸಚಿವಾಲಯ ಕಡ್ಡಾಯ ನಿವೃತ್ತಿಗೊಳಿಸಿತ್ತು. ಅವರು ತಮ್ಮ ಉಳಿದ ಅವಧಿ ಪೂರ್ಣಗೊಳಿಸಲು ಸೂಕ್ತರಲ್ಲ ಎಂದು ತಿಳಿದು ಬಂದಿದೆ ಎಂದು ಗೃಹ ಸಚಿವಾಲಯದ ಆದೇಶ ತಿಳಿಸಿತ್ತು.

ಠಾಕೂರ್ ಅವರ ನಿಗದಿತ ಸೇವಾವಧಿ 2028ರಂದು ಕೊನೆಗೊಳ್ಳಲಿತ್ತು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಮುಲಾಯಂ ಸಿಂಗ್ ಅವರು ತಮಗೆ ಬೆದರಿಕೆಯೊಡ್ಡಿದ್ದಾರೆಂದು  ಆರೋಪಿಸಿದ ಬೆನ್ನಲ್ಲೇ ಅಮಿತಾಭ್ ಠಾಕೂರ್ ಅವರನ್ನು ಜುಲೈ 13, 2015ರಂದು ಅಮಾನತುಗೊಳಿಸಲಾಗಿತ್ತು. ಅವರ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೂಡ ಆದೇಶಿಸಲಾಗಿತ್ತು.

ಆದರೆ 2016ರಕ್ಕೆ ಕೇಂದ್ರ ಆಡಳಿತಾತ್ಮಕ ಟ್ರಿಬ್ಯುನಲ್‍ನ ಲಕ್ನೋ ಪೀಠ ಅವರ ವಜಾ ಆದೇಶಕ್ಕೆ ತಡೆಯಾಜ್ಞೆ ವಿಧಿಸಿ ಅವರನ್ನು ಅವರ ಹಿಂದಿನ ಹುದ್ದೆಯಲ್ಲಿ ಪೂರ್ಣ ವೇತನದೊಂದಿಗೆ ಮರುಸ್ಥಾಪಿಸಬೇಕೆಂದು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News