ವಿಪಕ್ಷಗಳ ವಿರೋಧದ ನಡುವೆ ಗೋ ಸಂರಕ್ಷಣಾ ಮಸೂದೆ ಅಂಗೀಕರಿಸಿದ ಅಸ್ಸಾಂ ವಿಧಾನಸಭೆ
ಹೊಸದಿಲ್ಲಿ: ಅಸ್ಸಾಂ ವಿಧಾನಸಭೆ ಶುಕ್ರವಾರ ವಿಪಕ್ಷಗಳ ವಿರೋಧದ ನಡುವೆ ಗೋ ಸಂರಕ್ಷಣಾ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯ ಪರಿಶೀಲನೆಗೆ ಆಯ್ಕೆ ಸಮಿತಿಗೆ ಅದನ್ನು ಕಳುಹಿಸಲು ಸರಕಾರ ನಿರಾಕರಿಸಿದ್ದನ್ನು ವಿರೋಧಿಸಿ ವಿಪಕ್ಷಗಳು ಸದನದಿಂದ ಹೊರನಡೆದಿವೆ.
ಅಸ್ಸಾಂ ಗೋ ಸಂರಕ್ಷಣಾ ಮಸೂದೆ 2021 ಹೆಸರಿನ ಈ ಮಸೂದೆಯು ರಾಜ್ಯದಲ್ಲಿ ಗೋಹತ್ಯೆಯನ್ನು ಕೆಲವು ಧಾರ್ಮಿಕ ಸಂದರ್ಭಗಳನ್ನು ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ನಿಷೇಧಿಸುತ್ತದೆ.
ಸೂಕ್ತ ದಾಖಲೆಗಳಿಲ್ಲದೆ ಅಸ್ಸಾಂನೊಳಗೆ ಹಾಗೂ ಅಲ್ಲಿಂದ ಬೇರೆ ಕಡೆಗಳಿಗೆ ಗೋಸಾಗಾಟವನ್ನು ಈ ಮಸೂದೆ ನಿಷೇಧಿಸುತ್ತದೆಯಲ್ಲದೆ ಹಿಂದುಗಳು ಸಿಖರು, ಜೈನರು ಹಾಗೂ ಇತರ ಬೀಫ್ ತಿನ್ನದ ಸಮುದಾಯಗಳು ವಾಸಿಸುವ ಸ್ಥಳಗಳಲ್ಲಿ ಬೀಫ್ ಮಾರಾಟ ನಿಷೇಧಿಸುತ್ತದೆ. ದೇವಸ್ಥಾನಗಳ ಐದು ಕಿಮೀ ವ್ಯಾಪ್ತಿಯ ಪ್ರದೇಶಗಳಲ್ಲೂ ಬೀಫ್ ಮಾರಾಟ ನಿಷೇಧಿಸಲಾಗಿದೆ.
ನಿಯಮಗಳ ಉಲ್ಲಂಘಕರಿಗೆ ಎಂಟು ವರ್ಷಗಳ ತನಕ ಜೈಲು ಶಿಕ್ಷೆ ಹಾಗೂ ರೂ 5 ಲಕ್ಷ ತನಕ ದಂಡ ವಿಧಿಸಲಾಗುವುದು.
ಮಸೂದೆಯನ್ನು ಸಮರ್ಥಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ತಮ್ಮ ಸರ್ಕಾರ ಈ ಹಿಂದಿನ, 1950ರಲ್ಲಿ ಜಾರಿಗೆ ಬಂದ ಕಾನೂನಿಗೆ ಯಾವುದೇ ಹೊಸ ನಿಬಂಧನೆಗಳನ್ನು ಸೇರಿಸಿಲ್ಲ, ಹಿಂದಿನ ಕಾನೂನಿನ ಪ್ರಕಾರ 14 ವರ್ಷಕ್ಕಿಂತ ಕೆಳಗಿನ ಪ್ರಾಯದ ದನವನ್ನು ಸಾಯಿಸುವ ಹಾಗಿಲ್ಲದಿದ್ದರೆ ಈ ಮಸೂದೆಯ ಪ್ರಕಾರ ಯಾವ ವಯಸ್ಸಿನ ದನವನ್ನೂ ಹತ್ಯೆಗೈಯ್ಯುವ ಹಾಗಿಲ್ಲ ಎಂದು ಹೇಳಿದ್ದಾರೆ.
ಆದರೆ ದನಗಳನ್ನು ಸಾಕುವವರಿಗೆ ಈ ಮಸೂದೆಯಿಂದ ಆರ್ಥಿಕ ನಷ್ಟ ಉಂಟಾಗಲಿದೆ, ಬಡವರ ಜೀವನೋಪಾಯಕ್ಕೆ ಕೊಡಲಿಯೇಟು ಬೀಳಬಹುದು ಎಂದು ವಿಪಕ್ಷಗಳು ದೂರಿವೆ.