×
Ad

ಕೊಲ್ಕತ್ತಾ: ಮನೆ ಬಾಗಿಲು ಮುರಿದು ಬಿಜೆಪಿ ನಾಯಕನನ್ನು ಬಂಧಿಸಿದ ಪೊಲೀಸರು

Update: 2021-08-14 18:26 IST
Photo: Facebook

ಹೊಸದಿಲ್ಲಿ : ಬಿಜೆಪಿ ನಾಯಕ ಸಾಜಲ್ ಘೋಷ್ ಅವರ ಮನೆ ಬಾಗಿಲನ್ನು ಒಡೆದು ಕೊಲ್ಕತ್ತಾ ಪೊಲೀಸರು ಅವರನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆಯ ನಿಬಂಧನೆಗಳ ಉಲ್ಲಂಘನೆ ಮತ್ತು ಕಳ್ಳತನದ ಆರೋಪವನ್ನು ಹೊರಿಸಲಾಗಿದೆ.

ಟಿವಿ ಕ್ಯಾಮರಾಗಳ ಮುಂದೆಯೇ ಪೊಲೀಸರು ಅವರ ಮನೆ ಬಾಗಿಲನ್ನು ಒಡೆದು ಅವರನ್ನು ಬಂಧಿಸಿದ್ದಾರೆ. "ನಾನು ಯಾವುದೇ ಅಪರಾಧಗೈಯ್ಯದೇ ಇದ್ದರೂ ನನ್ನನ್ನು ಬಂಧಿಸಲಾಗಿದೆ. ಈ ರಾಜ್ಯದಲ್ಲಿ ನಾನು ಹುಟ್ಟಿದ್ದೇನೆಂದು ಹೇಳಲು ನನಗೆ ಅವಮಾನವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

ಶಸ್ತಾಸ್ತ್ರ ಕಾಯಿದೆಯನ್ವಯ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು. ಆದರೆ ಪೊಲೀಸರ ಜತೆ ಸಹಕರಿಸುವಂತೆ ಹೇಳಿದಾಗ ಅವರು ಮನೆ ಬಾಗಿಲು  ಮುಚ್ಚಿದ್ದರು. ನಂತರ ಕಿಟಕಿ ಮೂಲಕ ಮಾಧ್ಯಮಗಳ ಜತೆ ಮಾತನಾಡಿದ ಅವರು "ಬಂಧಿಸಬೇಕಿದ್ದರೆ ಮನೆಬಾಗಿಲನ್ನು ಒಡೆಯಬೇಕು" ಎಂದಿದ್ದರು.

ನಂತರ ಅಲ್ಲಿಗೆ ಹೆಚ್ಚುವರಿ ಪೊಲೀಸ್ ಪಡೆ ಆಗಮಿಸಿತ್ತಲ್ಲದೆ ಪೊಲೀಸರು ಅವರ ಮನೆ ಬಾಗಿಲು ತುಳಿದು ನಂತರ ಅವರನ್ನು ಬಂಧಿಸಲಾಗಿತ್ತು. ಸಾಜಲ್ ಮತ್ತು ಅವರ ತಂದೆ ಪ್ರದೀಪ್ ಘೋಷ್ ಪ್ರಭಾವಿ ಬಿಜೆಪಿ ನಾಯಕರಾಗಿದ್ದಾರೆ. ಪ್ರದೀಪ್ ಈ ಹಿಂದೆ ಟಿಎಂಸಿಯಲ್ಲಿದ್ದರು.

ಪೊಲೀಸರು ಮನೆಬಾಗಿಲನ್ನು ಒಡೆದು ಬಲವಂತದಿಂದ ತನ್ನ ಪತಿಯನ್ನು ಬಂಧಿಸಿದ್ದಾರೆಂದು ಸಾಜಲ್ ಅವರ ಪತ್ನಿ ತಾನಿಯಾ ಘೋಷ್ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕೂಡ ಈ ಬಂಧನವನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News