ಕೇವಲ 130 ಜನರಿರುವ ಜರ್ಮನಿಯ ಈ ಪುಟ್ಟ ಗ್ರಾಮ ನೀರಜ್ ಚೋಪ್ರಾರ ಒಲಿಂಪಿಕ್ ಚಿನ್ನದ ಸಂಭ್ರಮವನ್ನಾಚರಿಸಿದ್ದೇಕೆ?

Update: 2021-08-16 09:06 GMT

ಹೊಸದಿಲ್ಲಿ,ಆ.14: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ತವರಿಗೆ ಮರಳಿದಾಗ ವಿಮಾನ ನಿಲ್ದಾಣದಲ್ಲಿ ಜನಸಮೂಹ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡಿತ್ತು. ಸನ್ಮಾನಗಳು,‌ ಶತಕೋಟಿ ಜನರಿಂದ ‘ಥ್ಯಾಂಕ್ಯೂ’ಗಳನ್ನು ಚೋಪ್ರಾ ಸ್ವೀಕರಿಸುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಅವರ ಇಬ್ಬರು ಜರ್ಮನ್ ಕೋಚ್ ಗಳು ಏಕಾಂತದಲ್ಲಿ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಚೋಪ್ರಾರ ಬಯೊಮೆಕ್ಯಾನಿಕಲ್ ಕೋಚ್ ಡಾ.ಕ್ಲಾವುಸ್ ಬಾರ್ತೊನಿಯೆಝ್ (73) ಒಂದೂವರೆ ವರ್ಷದ ಬಳಿಕ ನೈರುತ್ಯ ಜರ್ಮನಿಯಲ್ಲಿನ ತನ್ನ ಹುಟ್ಟೂರು,ಕೇವಲ 130ರಷ್ಟು ಜನಸಂಖ್ಯೆಯನ್ನು ಹೊಂದಿರುವ ಪುಟ್ಟಗ್ರಾಮ ಒಬೆರ್ಸ್ಕಾಲೆಟನ್ಬಾಚ್ ಗೆ ಆಗಷ್ಟೇ ಬಂದಿಳಿದಿದ್ದರು. ತನ್ನ ಕುಟುಂಬ ವೈದ್ಯರ ಭೇಟಿಗಾಗಿ ಸಮಯವನ್ನು ನಿಗದಿಪಡಿಸಿಕೊಳ್ಳುತ್ತಿದ್ದ ವೇಳೆ ರಾತ್ರಿ ಬೆಳಗಾಗುವುದರೊಳಗೆ ಜಾವೆಲಿನ್ ತಾರೆಯಾಗಿ ಮೂಡಿಬಂದಿದ್ದ ಶಿಷ್ಯ ಚೋಪ್ರಾರ ಸುತ್ತ ಭದ್ರತಾ ಸಿಬ್ಬಂದಿಗಳ ಸರ್ಪಗಾವಲು ತೋರಿಸುವ ವೀಡಿಯೊ ಕ್ಲಿಪ್ ಗಳನ್ನು ಕಂಡು ಮುದಗೊಂಡಿದ್ದರು.

‘ನೀರಜ್ ಜೊತೆ ಭಾರತದಲ್ಲಿ ಅದೇನಾಗುತ್ತಿದೆ? ಜನರು ಹುಚ್ಚೆದ್ದಿರುವಂತಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ಪದಕ ಎನ್ನುವುದು ನನಗೆ ಗೊತ್ತು. ಅವರ ರಕ್ಷಣೆಗೆ ಅರೆ ಸೇನಾಪಡೆಯನ್ನು ಕರೆಸಿರುವ ಚಿತ್ರಗಳನ್ನು ನಾನು ನೋಡಿದ್ದೇನೆ’ ಎಂದು ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಾರ್ತೊನಿಯೆಝ್ ಹೇಳಿದರು.
 ಭಾರತದ ಮುಖ್ಯ ಜಾವೆಲಿನ್ ಕೋಚ್ ಉಯೆ ಹಾನ್ ಅವರೂ 8,000ಕ್ಕೂ ಕಡಿಮೆ ಜನಸಂಖ್ಯೆಯ ತನ್ನೂರು ರೀನ್ಸ್ ಬರ್ಗ್ ನಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಮಿಲನದ ಖುಷಿಯನ್ನು ಅನುಭವಿಸುತ್ತಲೇ ಭಾರತದ ಮೇಲೆ ಒಂದು ಕಣ್ಣಿಟ್ಟಿದ್ದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಚಿನ್ನದ ಪದಕಕ್ಕಾಗಿ ದಶಕಗಳಿಂದ ಕಾತರಿಸಿದ್ದ ಭಾರತ ಪಾಲಿಗೆ ಚೋಪ್ರಾರ ಗೆಲುವು ಏನು ಎನ್ನುವುದು ಅವರಿಗೆ ಕ್ರಮೇಣ ಅರ್ಥವಾಗತೊಡಗಿತ್ತು. ಟೋಕಿಯೊ, ಭಾರತ ಮತ್ತು ಚಿನ್ನದ ಪದಕದ ಬಗ್ಗೆ ಮಾತನಾಡಲು ಅವರು ತನ್ನ ತಾಯಿ ಮತ್ತು ಸೋದರಿಯನ್ನು ಭೇಟಿಯಾಗಿದ್ದರು.

ತನ್ನ ನೂತನ ಒಲಿಂಪಿಕ್ ತಾರೆಗೆ ಭಾರತದ ಭಾವನಾತ್ಮಕ ಸ್ವಾಗತವನ್ನು ಫಾಲೋ ಮಾಡಲು ಹಾನ್ ಆಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿದ್ದಾರೆ.‘ನಿಜ,ಫೇಸ್ಬುಕ್ ನೀರಜ್ ಗೆ ಸ್ವಾಗತಗಳಿಂದ ತುಂಬಿಹೋಗಿದೆ. ಇದು ನೀರಜ್ ಮತ್ತವರ ಯಶಸ್ಸಿನ ಸಂಭ್ರಮಾಚರಣೆಯ ಸಮಯವಾಗಿದೆ. ಈ ಎಲ್ಲ ಗೌರವಗಳಿಗೆ ಅವರು ಅರ್ಹರಾಗಿದ್ದಾರೆ. ಅವರ ಯಶಸ್ಸು ಭಾರತದಲ್ಲಿ ಕೇವಲ ಜಾವೆಲಿನ್ ಕ್ರೀಡಾಳುಗಳ ಮೇಲೆ ಮಾತ್ರವಲ್ಲ,ಎಲ್ಲ ಅತ್ಲೀಟ್ಗಳ ಮೇಲೂ ಪ್ರಭಾವ ಬೀರುತ್ತದೆ ಎಂದು ನಾನು ಆಶಿಸಿದ್ದೇನೆ. 

ಜಗತ್ತಿನ ಅತ್ಯಂತ ಪ್ರತಿಭಾವಂತ ಕ್ರೀಡಾಪಟುವಿಗೆ ಸೂಕ್ತ ಕೋಚ್ ಇಲ್ಲ ಎನ್ನುವುದು ಗೊತ್ತಾದಾಗ ನಾನು ಭಾರತಕ್ಕೆ ಬಂದಿದ್ದೆ ಮತ್ತು ಡಾ.ಕ್ಲಾವುಸ್ರನ್ನೂ ಕರೆಸಿಕೊಂಡಿದ್ದೆ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾವು ಬಳಸಿದ್ದ ತಂತ್ರ ಕಳೆದ ಕೆಲವು ತಿಂಗಳುಗಳಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಿತ್ತು’ ಎಂದು ರೀನ್ಸ್ಬರ್ಗ್ ನಿಂದ ಮತನಾಡಿದ ಹಾನ್ ಹೇಳಿದರು. ಚೋಪ್ರಾ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಪಡೆದಾಗಲೂ ಹಾನ್ ಅವರ ಕೋಚ್ ಆಗಿದ್ದರು. ಒಮ್ಮೆ ಪೂರ್ವ ಜರ್ಮನಿಯ ‘ಸ್ಟಾರ್’ ಆಗಿದ್ದ ಹಾನ್ ಜಾವೆಲಿನ್ ಅನ್ನು 100 ಮೀ.ಗೂ ಅಧಿಕ ದೂರ ಎಸೆದಿದ್ದ ಏಕೈಕ ಕ್ರೀಡಾಳುವಾಗಿದ್ದಾರೆ.

ಅತ್ತ ಒಬೆರ್ಸ್ಕಾಲೆಟನ್ಬಾಚ್ನಲ್ಲಿ ಡಾ.ಕ್ಲಾವುಸ್ ಒಂದು ರೀತಿಯಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸೂಚಿಸಿ ಹಲವಾರು ಫೋನ್ ಕರೆಗಳು ಬರುತ್ತಲೇ ಇವೆ. ಟೋಕಿಯೊದಲ್ಲಿ ಪುರುಷರ ಜಾವೆಲಿನ್ ಫೈನಲ್ನ್ನು ಟಿವಿಗಳಲ್ಲಿ ನೋಡಿದ್ದ ಅವರ ನೆರೆಕರೆಯವರು ಒಲಿಂಪಿಕ್ನಂತಹ ಬೃಹತ್ ವೇದಿಕೆಯಲ್ಲಿ ಚೋಪ್ರಾ ತನ್ನ ಶಾಂತಚಿತ್ತ ಮತ್ತು ಏಕಾಗ್ರತೆಯನ್ನು ಕಾಯ್ದುಕೊಂಡಿದ್ದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಕಾತುರರಾಗಿದ್ದರು. 

ಚೋಪ್ರಾರ ಸಾಧನೆ ಆ ಪುಟ್ಟಗ್ರಾಮದಲ್ಲಿ ಬಹುಚರ್ಚಿತ ವಿಷಯವಾಗಿತ್ತು. ‘ನೀರಜ್ ಬಗ್ಗೆ ಕೇಳುತ್ತಿರುವ ಅವರೆಲ್ಲ ಸಾಮಾನ್ಯ ಜನರಾಗಿದ್ದಾರೆ,ಕ್ರೀಡಾಪಟುಗಳಲ್ಲ. ನನಗೆ ತಿಳಿದಿರುವ ಕೋಚ್ಗಳು ಮತ್ತು ಅತ್ಲೀಟ್ ಗಳೂ ಫೋನ್ ಮಾಡುತ್ತಿದ್ದಾರೆ. ಅವರು ನಮ್ಮನ್ನು ಟಿವಿಯಲ್ಲಿ ನೋಡಿದ್ದರು. ಸ್ಥಿತಿ ಹೇಗೆ ಬದಲಾಗುತ್ತಿದೆ ಎನ್ನುವುದು ನಿಜಕ್ಕೂ ಮೋಜು ನೀಡುತ್ತಿದೆ ಎಂದು ಡಾ.ಕ್ಲಾವುಸ್ ಹೇಳಿದರು.

ಜರ್ಮನಿಯ ಜಾವೆಲಿನ್ ತಾರೆ ಜೋಹಾನ್ನೆಸ್ ವೆಟರ್ ಅವರ ಕೋಚ್ ಆಗಿರುವ ಬೋರಿಸ್ ಒಬೆರ್ಗ್ಫಾಲ್ ಒಂದು ಕಾಲದಲ್ಲಿ ಡಾ.ಕ್ಲಾವುಸ್ ಅವರ ಶಿಷ್ಯರಾಗಿದ್ದರು. ‘ಮೋಜಿನ ವಿಷಯವೆಂದರೆ ವೆಟರ್ ಕೋಚ್ ನನ್ನ ಮಾಜಿ ಅಥ್ಲೀಟ್ ಆಗಿದ್ದರು. ಅವರಿಬ್ಬರು ಒಲಿಂಪಿಕ್ ವರೆಗೆ ಎಲ್ಲ ಕಾಲದಲ್ಲಿಯೂ ಉತ್ತಮ ಪ್ರದರ್ಶನವನ್ನೇ ನೀಡಿದ್ದರು ’ ಎಂದು ಡಾ.ಕ್ಲಾವುಸ್ ಹೇಳಿದರು.

ಭಾರತ ಮತ್ತು ಜರ್ಮನಿಯಲ್ಲಿ ಒಲಿಂಪಿಕ್ ಪದಕ ವಿಜೇತರಿಗೆ ನಗದು ಬಹುಮಾನಗಳನ್ನೂ ಡಾ.ಕ್ಲಾವುಸ್ ಹೋಲಿಸಿದರು. ‘ಜರ್ಮನಿಯಲ್ಲಿ ಚಿನ್ನದ ಪದಕ ವಿಜೇತರಿಗೆ 20,000 ಯುರೊ(ಸುಮಾರು 17 ಲ.ರೂ.) ಬಹುಮಾನ ನೀಡಲಾಗುತ್ತದೆ. ನೀರಜ್ ಗೆ ಸರಕಾರ ಮತ್ತು ಪ್ರಾಯೋಜಕರಿಂದ ದೊರೆತಿರುವ ಬೆಂಬಲವು ಅತ್ಯಂತ ಮಹತ್ವದ್ದಾಗಿದೆ. ಹೆಮ್ಮೆ ನನಗೊಬ್ಬನಿಗೇ ಅಲ್ಲ. ನೀರಜ್ ಜ್ಯೂನಿಯರ್ ವಿಶ್ವ ದಾಖಲೆಯನ್ನು ಮುರಿದಾಗ ಅವರ ಕೋಚ್ ಆಗಿದ್ದ ಗ್ಯಾರಿ ಕಲ್ವರ್ಟ್,ಉವೆ ಹಾನ್,ಅವರನ್ನು ಪ್ರೋತ್ಸಾಹಿಸಿದ್ದ ಆದರೆ ನಮಗೆ ತಿಳಿದಿರದ ಜನರು,ನೀರಜ್ ಶಾಲೆಯಲ್ಲಿ ಓದುತ್ತಿದ್ದಾಗ ಜಾವೆಲಿನ್ ಎಸೆಯುವಂತೆ ಅವರಿಗೆ ಸೂಚಿಸಿದ್ದ ಶಿಕ್ಷಕರು ಎಲ್ಲರೂ ಈಗ ಅತ್ಯಂತ ಹೆಮ್ಮೆ ಪಟ್ಟುಕೊಳ್ಳುತ್ತಿರಬೇಕು ’ ಎಂದರು.

ಡಾ.ಕ್ಲಾವುಸ್ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಮರಳಲಿದ್ದಾರೆ. ತಾನು ಊರಿನಲ್ಲಿ ಹೆಚ್ಚು ದಿನ ಇರಲಾಗುವುದಿಲ್ಲ ಎನ್ನುವುದು ಹಾನ್ ಗೂ ಗೊತ್ತಿದೆ. 2022ರಲ್ಲಿ ವಿಶ್ವ ಚಾಂಪಿಯನ್ಶಿಪ್, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ನಡೆಯಲಿದ್ದು ಅದಕ್ಕಾಗಿ ತಯಾರಿ ನಡೆಸಬೇಕಿದೆ ಎಂದು ಅವರು ಹೇಳಿದರು.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News