ರಾಹುಲ್ ಗಾಂಧಿ ಇನ್ಸ್ಟಾಗ್ರಾಂ ಪೋಸ್ಟ್: ಆ.17ರಂದು ತನ್ನೆದುರು ಹಾಜರಾಗುವಂತೆ ಫೇಸ್ಬುಕ್ ಗೆ ಎನ್ಸಿಪಿಸಿಆರ್ ಸಮನ್ಸ್

Update: 2021-08-14 17:01 GMT

ಹೊಸದಿಲ್ಲಿ,ಆ.14: ವಾಯುವ್ಯ ದಿಲ್ಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ಒಂಭತ್ತರ ಹರೆಯದ ಬಾಲಕಿಯ ಕುಟುಂಬ ಸದಸ್ಯರೊಂದಿಗೆ ತನ್ನ ಭೇಟಿಯ ವೀಡಿಯೊವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ನೋಟಿಸಿಗೆ ಫೇಸ್ಬುಕ್ ಉತ್ತರಿಸದ ಹಿನ್ನೆಲೆಯಲ್ಲಿ ಗರಂ ಆಗಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಆ.17ರಂದು ತನ್ನೆದುರು ಹಾಜರಾಗುವಂತೆ ಅದಕ್ಕೆ ಸಮನ್ಸ್ ಹೊರಡಿಸಿದೆ. ಫೇಸ್ಬುಕ್ ಇನ್ಸ್ಟಾಗ್ರಾಮ್ ನ ಒಡೆತನವನ್ನು ಹೊಂದಿದೆ.

ಅತ್ಯಾಚಾರ ಸಂತ್ರಸ್ತೆಯ ಅಥವಾ ಕುಟುಂಬ ಸದಸ್ಯರ ಗುರುತನ್ನು ಬಹಿರಂಗಗೊಳಿಸುವ ಯಾವುದೇ ಚಿತ್ರಗಳು ಅಥವಾ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಬಹಿರಂಗಗೊಳಿಸುವುದನ್ನು ಭಾರತೀಯ ಕಾನೂನುಗಳು ನಿಷೇಧಿಸಿವೆ.

ಬಾಲನ್ಯಾಯ ಕಾಯ್ದೆ, ಪೊಕ್ಸೊ ಕಾಯ್ದೆ ಮತ್ತು ಐಪಿಸಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರ ಇನಸ್ಟಾಗ್ರಾಂ ಪ್ರೊಫೈಲ್ ನ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಮತ್ತು ಆಕ್ಷೇಪಾರ್ಹ ವೀಡಿಯೊವನ್ನು ತೆಗೆಯುವಂತೆ ಎನ್ಸಿಪಿಸಿಆರ್ ಈ ಹಿಂದೆ ಫೇಸ್ಬುಕ್ಗೆ ಸೂಚಿಸಿತ್ತು. ಇದಕ್ಕೆ ಫೇಸ್ಬುಕ್ ಸ್ಪಂದಿಸಿರಲಿಲ್ಲ.

ಆ.17ರಂದು ಮಂಗಳವಾರ ಸಂಜೆ ಐದು ಗಂಟೆಗೆ ದಿಲ್ಲಿಯ ಜನಪಥ್ ರಸ್ತೆಯಲ್ಲಿರುವ ತನ್ನ ಕಚೇರಿಗೆ ಕ್ರಮಪಾಲನಾ ವಿವರಗಳೊಂದಿಗೆ ಖುದ್ದಾಗಿ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗುವಂತೆ ಎನ್ಸಿಪಿಸಿಆರ್ ಫೇಸ್ಬುಕ್ ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
 
ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿಯವರ ಹ್ಯಾಂಡಲ್ ನ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚಿಸಿ ಎನ್ಸಿಪಿಸಿಆರ್ ಆ.4ರಂದು ಟ್ವಿಟರ್ ಗೆ ಪತ್ರವನ್ನು ಬರೆದಿತ್ತು. ಇದಕ್ಕೆ ಸ್ಪಂದಿಸಿದ ಟ್ವಿಟರ್ ರಾಹುಲ್ ಖಾತೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸಿದ್ದು,ಶನಿವಾರ ಅದನ್ನು ಮರುಸ್ಥಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News