ಅಫ್ಘಾನ್ ಬಿಕ್ಕಟ್ಟು: ಕೆಲ ದಿನಗಳಲ್ಲೇ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ತಾಲಿಬಾನ್ ಬೇಡಿಕೆ
ಕಾಬೂಲ್: ತಾಲಿಬಾನಿಗಳು "ಮುಂದಿನ ದಿನಗಳಲ್ಲಿ" ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲಿದ್ದಾರೆ ಎಂದು ತಾಲಿಬಾನ್ ವಕ್ತಾರರು ಬಿಬಿಸಿಗೆ ರವಿವಾರ ಹೇಳಿಕೆ ನೀಡಿದ್ದಾರೆ. ತಾಲಿಬಾನ್ ಹೋರಾಟಗಾರರು ರಾಜಧಾನಿಯನ್ನು ಸುತ್ತುವರಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
"ಮುಂದಿನ ದಿನಗಳಲ್ಲಿ, ನಾವು ಶಾಂತಿಯುತ ಅಧಿಕಾರ ವರ್ಗಾವಣೆಯನ್ನು ಬಯಸುತ್ತೇವೆ" ಎಂದು ಗುಂಪಿನ ಸಂಧಾನ ತಂಡದ ಭಾಗವಾಗಿ ಕತಾರ್ ನಲ್ಲಿರುವ ಸುಹೇಲ್ ಶಾಹೀನ್ ಬಿಬಿಸಿಗೆ ತಿಳಿಸಿದ್ದಾರೆ.
"ನಾವು ಎಲ್ಲರನ್ನೂ ಒಳಗೊಳ್ಳುವ ಇಸ್ಲಾಮಿಕ್ ಸರ್ಕಾರವನ್ನು ಬಯಸುತ್ತೇವೆ. ಅಂದರೆ ಎಲ್ಲಾ ಆಫ್ಘಾನ್ ನಾಗರಿಕರು ಆ ಸರ್ಕಾರದ ಭಾಗವಾಗುತ್ತಾರೆ" ಎಂದು ಶಾಹೀನ್ ಹೇಳಿದರು.
"ಭವಿಷ್ಯದಲ್ಲಿ ಶಾಂತಿಯುತ ಅಧಿಕಾರ ವರ್ಗಾವಣೆ ನಡೆಯಲಿರುವುದನ್ನು ನಾವು ನೋಡುತ್ತೇವೆ. ವಿದೇಶಿ ರಾಯಭಾರ ಕಚೇರಿಗಳು ಮತ್ತು ಕಾರ್ಮಿಕರನ್ನು ಗುಂಪಿನ ಹೋರಾಟಗಾರರು ಗುರಿಯಾಗಿಸುವುದಿಲ್ಲ ಮತ್ತು ಅವರು ದೇಶದಲ್ಲಿಯೇ ಉಳಿಯಬೇಕು" ಎಂದು ಹೇಳಿದರು.
"ರಾಜತಾಂತ್ರಿಕರು, ಎನ್‌ಜಿಒಗಳು, ಯಾರಿಗೂ ಯಾವುದೇ ಅಪಾಯವಿರುವುದಿಲ್ಲ. ಎಲ್ಲರೂ ಹಿಂದೆ ಮುಂದುವರಿದಂತೆ ತಮ್ಮ ಕೆಲಸವನ್ನು ಮುಂದುವರಿಸಬೇಕು. ತಾಲಿಬಾನ್ ಸದಸ್ಯರು ಅವರಿಗೆ ಹಾನಿ ಮಾಡುವುದಿಲ್ಲ, ಅವರು ಉಳಿಯಬೇಕು." ನಾವು ಎಲ್ಲ ಅಫ್ಘಾನ್ ನಾಗರಿಕರೊಂದಿಗೆ ಕೆಲಸ ಮಾಡಲು ಬಯಸುತ್ತೇವೆ, ನಾವು ಶಾಂತಿ ಮತ್ತು ಸಹಿಷ್ಣುತೆ, ಶಾಂತಿಯುತ ಸಹಬಾಳ್ವೆ ಮತ್ತು ರಾಷ್ಟ್ರೀಯ ಐಕ್ಯತೆಯ ಹೊಸ ಅಧ್ಯಾಯವನ್ನು ದೇಶಕ್ಕಾಗಿ ಮತ್ತು ಅಫ್ಘಾನಿಸ್ತಾನದ ಜನರಿಗಾಗಿ ತೆರೆಯಲು ಬಯಸುತ್ತೇವೆ" ಎಂದು ಅವರು ಹೇಳಿದರು.