ಸ್ವಾತಂತ್ರ್ಯ ಹೋರಾಟಗಾರ್ತಿ ಬಗ್ಗೆ ತಪ್ಪು ಮಾಹಿತಿ: ಪ್ರಧಾನಿ ಕ್ಷಮೆ ಕೋರುವಂತೆ ಟಿಎಂಸಿ ಆಗ್ರಹ
ಅಟ್ಟಾರಿ, ಆ. 15: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚರಿತ್ರೆಯ ಜ್ಞಾನದ ಕೊರತೆ ಇದೆ ಎಂದು ರವಿವಾರ ಹೇಳಿರುವ ತೃಣಮೂಲ ಕಾಂಗ್ರೆಸ್, ಅವರು ಪಶ್ಚಿಮಬಂಗಾಳದ ಸ್ವಾತಂತ್ರ ಹೋರಾಟಗಾರ್ತಿ ಮಾತಾಂಗಿನಿ ಹಝ್ರಾ ಅಸ್ಸಾಂನಿಂದ ಬಂದವರು ಎಂದು ತಪ್ಪಾಗಿ ಹೇಳಿರುವುದಕ್ಕೆ ಕ್ಷಮೆ ಕೋರುವಂತೆ ಆಗ್ರಹಿಸಿದೆ.
ಪ್ರಧಾನಿ ಅವರ ಸ್ವಾತಂತ್ರೋತ್ಸವ ದಿನದ ಭಾಷಣದ ತಪ್ಪಿನ ಕುರಿತಂತೆ ಟಿಎಂಸಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಹಲವು ಬಾರಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚರಿತ್ರೆಯ ಜ್ಞಾನದ ಕೊರತೆ ಇದೆ. ಅವರು ಲಿಖಿತ ಪಠ್ಯವನ್ನು ನಾಟಕೀಯ ಶೈಲಿಯಲ್ಲಿ ಓದಿದ್ದಾರೆ ಎಂದು ಪಶ್ಚಿಮಬಂಗಾಳದ ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದ್ದಾರೆ. ಮಾತಂಗಿನಿ ಹಝ್ರಾ ಅಸ್ಸಾಂನವರೇ? ನಿಮಗೆ ಹುಚ್ಚೇ? ನಿಮಗೆ ಚರಿತ್ರೆ ತಿಳಿದಲ್ಲವೇ? ನಿಮಗೆ ಭಾವನೆಗಳಿಲ್ಲವೇ? ನೀವು ಕೇವಲ ಬರೆದ ಭಾಷಣವನ್ನು ನಾಟಕೀಯವಾಗಿ ಓದುತ್ತೀರಿ ಎಂದು ಟಿಎಂಸಿ ವಕ್ತಾರ ಟ್ವೀಟ್ ಮಾಡಿದ್ದಾರೆ.