ಜಮ್ಮು-ಕಾಶ್ಮೀರ: ಹತ ಉಗ್ರ ಬುರ್ಹಾನ್ ವಾನಿಯ ತಂದೆಯಿಂದ ರಾಷ್ಟ್ರಧ್ವಜಾರೋಹಣ

Update: 2021-08-15 17:11 GMT
photo : twitter.com/ashwani_mahajan

ಶ್ರೀನಗರ,ಆ.15: ಭದ್ರತಾ ಪಡೆಗಳಿಂದ ಹತ್ಯೆಯಾದ ಹಿಝ್ಬುಲ್ ಮುಜಾಹಿದೀನ್ನ ಕಮಾಂಡರ್ ಬುರ್ಹಾನ್ ವಾನಿಯ ತಂದೆ ಮುಝಫ್ಫರ್ ವಾನಿ ಅವರು ರವಿವಾರ ಪುಲ್ವಾಮಾ ಜಿಲ್ಲೆಯ ತ್ರಾಲ್ನ ಸರಕಾರಿ ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಬುರ್ಹಾನ್ ಹತ್ಯೆ 2016ರಲ್ಲಿ ಕಾಶ್ಮೀರ ಕಣಿವೆಯಲ್ಲಿ ವ್ಯಾಪಕ ನಾಗರಿಕ ದಂಗೆಗಳಿಗೆ ಕಾರಣವಾಗಿತ್ತು.

ಮುಝಪ್ಫರ್ ವಾನಿ ತ್ರಾಲ್ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಎಲ್ಲ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಜಮ್ಮು-ಕಾಶ್ಮೀರ ಆಡಳಿತವು ನಿರ್ದೇಶ ನೀಡಿತ್ತು. ಸಮಾರಂಭದ ವೀಡಿಯೊಗಳು ಮತ್ತು ಚಿತ್ರಗಳನ್ನು ಗೂಗಲ್ ಡ್ರೈವ್ನಲ್ಲಿ ಅಪ್ಲೋಡ್ ಮಾಡುವಂತೆಯೂ ಅದು ಸೂಚಿಸಿತ್ತು.

ಜಮ್ಮು-ಕಾಶ್ಮೀರದಾದ್ಯಂತ 23,000 ಸರಕಾರಿ ಶಾಲೆಗಳಿವೆ,ಆದರೆ ಹಲವಾರು ಶಾಲೆಗಳು ರಾಷ್ಟ್ರಧ್ವಜಾರೋಹಣವನ್ನು ನಡೆಸಲಿಲ್ಲ. ತನ್ನ ವಲಯದಲ್ಲಿನ 120 ಶಾಲೆಗಳ ಪೈಕಿ ಕೇವಲ ಮೂರು ಶಾಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆದಿದೆ ಎಂದು ಶ್ರೀನಗರದ ಶಿಕ್ಷಣಾಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಆ.15ರ ಸಂಭ್ರಮಕ್ಕಾಗಿ ಸಮಾವೇಶಗಳ ಮೇಲಿನ ಕೋವಿಡ್ ನಿರ್ಬಂಧವನ್ನು ಸರಕಾರವು ಸಡಿಲಿಸಿತ್ತು.

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದರೂ ಸ್ವಾತಂತ್ರೋತ್ಸವ ಸಿದ್ಧತೆಗಳಿಗಾಗಿ ಅವುಗಳನ್ನು ತೆರೆಯಲಾಗಿತ್ತು. ಸರಕಾರವು ರಾಷ್ಟ್ರಧ್ವಜಾರೋಹಣಕ್ಕಾಗಿ ಧ್ವಜಸಂಹಿತೆಯ ಕುರಿತು ಸುತ್ತೋಲೆಯನ್ನೂ ಹೊರಡಿಸಿತ್ತು.

ಕಾಶ್ಮೀರದಲ್ಲಿ ಈ ಹಿಂದೆಂದೂ ಕಂಡುಬಂದಿರದ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಸ್ವಾತಂತ್ರೋತ್ಸವ ಸಮಾರಂಭಗಳು 2019,ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರ ಬದಲಾಗಿದೆ ಎಂದು ತೋರಿಸಲು ಸರಕಾರದ ಪ್ರಯತ್ನವಾಗಿರುವಂತಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಪ್ರತ್ಯೇಕತಾವಾದವು ಉತ್ತುಂಗದಲ್ಲಿದ್ದಾಗ ಆ.15ರಂದು ಪ್ರಯಾಣಿಕ ವಾಹನಗಳಿಗೆ ರಾಷ್ಟ್ರಧ್ವಜವನ್ನು ಅಳವಡಿಸುವುದನ್ನು ಭದ್ರತಾ ಪಡೆಗಳು ಕಡ್ಡಾಯಗೊಳಿಸಿದ್ದವು. ಆದರೆ ಬಲವಂತದ ರಾಷ್ಟ್ರವಾದದ ಬಗ್ಗೆ ಪ್ರಶ್ನೆಗಳು ಉದ್ಭವಗೊಂಡ ಬಳಿಕ ಈ ಪರಿಪಾಠವನ್ನು ನಿಲ್ಲಿಸಲಾಗಿತ್ತು.

ರವಿವಾರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ ದಿನಾಚರಣೆ ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಉಪರಾಜ್ಯಪಾಲ ಮನೋಜ ಸಿನ್ಹಾ ಅವರು ರಾಷ್ಟ್ರಧ್ವಜಾರೋಹಣವನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News