ಸುಪ್ರೀಂ ಕೋರ್ಟ್ ಹೊರಗೆ ಮೈಗೆ ಬೆಂಕಿ ಹಚ್ಚಿಕೊಂಡ ಪುರುಷ ಮತ್ತು ಮಹಿಳೆ
Update: 2021-08-16 23:57 IST
ಹೊಸದಿಲ್ಲಿ, ಆ.16: ದಿಲ್ಲಿಯ ಭಗವಾನ ದಾಸ್ ರಸ್ತೆಯಲ್ಲಿರುವ ಸರ್ವೋಚ್ಚ ನ್ಯಾಯಾಲಯ ಸಂಕೀರ್ಣದ ಹೊರಗೆ ಸೋಮವಾರ ಬೆಳಿಗ್ಗೆ ಓರ್ವ ಪುರುಷ ಮತ್ತು ಓರ್ವ ಮಹಿಳೆ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದು,ಸುಟ್ಟ ಗಾಯಗಳಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಜೋಡಿಯ ಈ ಕೃತ್ಯಕ್ಕೆ ಕಾರಣವನ್ನು ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ಪುರುಷ ಮತ್ತು ಓರ್ವ ಮಹಿಳೆ ಮೈಗೆ ಬೆಂಕಿ ಹಚ್ಚಿಕೊಂಡಿದ್ದನ್ನು ಗಮನಿಸಿದ ನ್ಯಾಯಾಲಯದ ಪ್ರವೇಶದ್ವಾರದಲ್ಲಿದ್ದ ಪೊಲೀಸರು ತಕ್ಷಣವೇ ಬ್ಲಾಂಕೆಟ್ ಬಳಸಿ ಅವರನ್ನು ರಕ್ಷಿಸಿದ್ದಾರೆ. ಪೊಲೀಸ್ ವ್ಯಾನ್ ನಲ್ಲಿ ಅವರನ್ನು ರಾಮಮನೋಹರ ಆಸ್ಪತ್ರೆಗೆ ಸಾಗಿಸಿದ್ದು,ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ದೀಪಕ ಯಾದವ ಸುದ್ದಿಗಾರರಿಗೆ ತಿಳಿಸಿದರು. ಸ್ಥಳದಲ್ಲಿ ಸೀಮೆಎಣ್ಣೆ ಕ್ಯಾನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.