ಅಫಘಾನಿಸ್ತಾನ: ಗುರುದ್ವಾರದಲ್ಲಿ ಸಿಕ್ಕಿಕೊಂಡಿರುವ 200 ಸಿಕ್ಖರ ರಕ್ಷಣೆಗೆ ಕೇಂದ್ರಕ್ಕೆ ಅಮರಿಂದರ್ ಸಿಂಗ್ ತುರ್ತು ಸಂದೇ

Update: 2021-08-16 18:37 GMT

ಹೊಸದಿಲ್ಲಿ,ಆ.16: ಪ್ರಕ್ಷುಬ್ಧ ಅಫಘಾನಿಸ್ತಾನದ ಗುರುದ್ವಾರಾವೊಂದರಲ್ಲಿ ಸಿಕ್ಕಿ ಹಾಕಿಕೊಂಡಿರುವ 200 ಸಿಕ್ಖರನ್ನು ತೆರವುಗೊಳಿಸುವಂತೆ ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೇಂದ್ರ ಸರಕಾರಕ್ಕೆ ತುರ್ತು ಮನವಿಯನ್ನು ಮಾಡಿದ್ದಾರೆ.

ನೆರವು ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಸೋಮವಾರ ಟ್ವೀಟಿಸಿರುವ ಸಿಂಗ್,ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಫಘಾನಿಸ್ತಾನದ ಗುರುದ್ವಾರದಲ್ಲಿ ಸಿಕ್ಕಿಕೊಂಡಿರುವ ಸುಮಾರು 200 ಸಿಕ್ಖರು ಸೇರಿದಂತೆ ಅಲ್ಲಿರುವ ಎಲ್ಲ ಭಾರತೀಯರನ್ನು ತುರ್ತಾಗಿ ತೆರವುಗೊಳಿಸುವಂತೆ ಕೋರಿಕೊಂಡಿದ್ದಾರೆ. ಅವರ ಸುರಕ್ಷಿತ ತೆರವಿಗಾಗಿ ಅಗತ್ಯವಿರುವ ಯಾವುದೇ ನೆರವನ್ನು ನೀಡಲು ತನ್ನ ಸರಕಾರವು ಸಿದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ರವಿವಾರ ತಾಲಿಬಾನಿಗಳು ಅಫಘಾನಿಸ್ತಾನದ ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡ ಬಳಿಕ ಸೋಮವಾರ ವಾಯುಪ್ರದೇಶವನ್ನು ಮುಚ್ಚಲಾಗಿರುವುದು ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿದೆ. ಇದರಿಂದಾಗಿ ಅಪರಾಹ್ನ 12:30ಕ್ಕೆ ಕಾಬೂಲಿಗೆ ತನ್ನ ನಿಗದಿತ ವಿಮಾನಯಾನವನ್ನು ಏರ್ ಇಂಡಿಯಾ ರದ್ದುಗೊಳಿಸಿದೆ.

ಅಫಘಾನಿಸ್ತಾನವು ತಾಲಿಬಾನಿಗಳ ವಶವಾಗಿರುವುದು ಭಾರತದ ಪಾಲಿಗೆ ಒಳ್ಳೆಯ ವಿಷಯವಲ್ಲ,ಹೀಗಾಗಿ ದೇಶದ ಎಲ್ಲ ಗಡಿಗಳಲ್ಲಿ ಹೆಚ್ಚುವರಿ ಎಚ್ಚರಿಕೆಯನ್ನು ವಹಿಸುವ ಅಗತ್ಯವಿದೆ ಎಂದು ಸಿಂಗ್ ರವಿವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News