ಕರ್ನಾಟಕ-ಕಾಶ್ಮೀರ ಕಾಲ್ನಡಿಗೆ ಯಾತ್ರೆ: ಮಂಗಳೂರಿನಿಂದ ಹೊರಟ ಇಬ್ಬರು ಯುವಕರು

Update: 2021-08-17 05:57 GMT

ಪಡುಬಿದ್ರೆ :  ದಕ್ಷಿಣ ಕನ್ನಡ ಜಿಲ್ಲೆಯ ಯುವಕರಿಬ್ಬರು ಐತಿಹಾಸಿಕ ಸ್ಥಳಗಳ ಅಧ್ಯಯನ ಮಾಡುವ ಉದ್ದೇಶದಿಂದ ಕಾಲ್ನಡಿಗೆಯ ಮೂಲಕ ಕರ್ನಾಟಕದಿಂದ ಕಾಶ್ಮೀರರಕ್ಕೆ ಹೊರಟಿದ್ದಾರೆ.

ಬಂಟ್ವಾಳ ತಾಲೂಕಿನ ಫಜೀರು ಗ್ರಾಮದ ಯುವಕರಾದ ಮೆಹತಾಬ್ (21) ಹಾಗೂ ಬಿಲಾಲ್(18)  ಸೋಮವಾರ ಪಾದಯಾತ್ರೆ ಆರಂಭಿಸಿದ್ದು, ಮಧ್ಯಾಹ್ನ ವೇಳೆ ಪಡುಬಿದ್ರಿ ತಲುಪಿದ್ದಾರೆ.

ಮೆಹತಾಬ್ ಪ್ರಥಮ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು, ಸೂಪರ್ ಮಾರ್ಕೆಟ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಬಾರಿ ಎಸೆಸೆಲ್ಸಿ ಉತ್ತೀರ್ಣನಾಗಿದ್ದು, ಮುಂದೆ ಕಾಲೇಜು ಶಿಕ್ಷಣ ಪಡೆಯುವ ಇಚ್ಛೆಯನ್ನು ಹೊಂದಿದ್ದಾರೆ. ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ ವೇಳೆ ಸಾಧನೆ ಮಾಡಬೇಕೆಂಬ ಕನಸುಕಂಡು, ಸಹೋದರ ಸಂಬಂಧಿಯಾಗಿರುವ ಬಿಲಾಲ್ ಜೊತೆಗೂಡಿ ಪಾದಯಾತ್ರೆ ಮಾಡುವ ಬಗ್ಗೆ 4 ತಿಂಗಳ ಹಿಂದೆ ಯೋಜನೆ ಹಾಕಿಕೊಂಡಿದ್ದರು.

ಅದರಂತೆ 2,800 ಕಿಲೋಮೀಟರ್ ದೂರ ಸಾಗುವ 90 ದಿನಗಳ ಪಾದಯಾತ್ರೆಯನ್ನು ಸೋಮವಾರ ಮಂಗಳೂರಿನಿಂದ ಆರಂಭಿಸಿದ್ದು, ಪಾದಯಾತ್ರೆ ಮಾರ್ಗದಲ್ಲಿನ ಮಸೀದಿ, ಚರ್ಚ್ ಹಾಗೂ ಮಂದಿರಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ಯೂಟ್ಯೂಬ್ ಮಾಧ್ಯಮಕ್ಕೆ ಅಪ್‍ಲೋಡ್ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ದಿನವೊಂದಕ್ಕೆ 50ರಿಂದ 70 ಕಿಲೋ ಮೀಟರ್ ಕ್ರಮಿಸುವ ಗುರಿ ಹೊಂದಲಾಗಿದೆ. ರಾತ್ರಿ ವೇಳೆ ತಾವು ಸಂಚರಿಸುವ ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ಇಲ್ಲವೆ ಇತರೆಡೆ ಟೆಂಟ್‍ಹೌಸ್ ನಿರ್ಮಿಸಿ ವಿಶ್ರಾಂತಿ ಪಡೆದು ಮತ್ತೆ ಬೆಳಗ್ಗೆ ಎದ್ದು ಯಾತ್ರೆ ಮುಂದುವರೆಸಲಾಗುವುದು ಎಂದು ವಿವರಿಸಿದ್ದಾರೆ.

ಸಹೋದರ ಸಂಬಂಧಿ ಹಾಗೂ ನೆರೆಮನೆಯವನಾಗಿರುವ ಮೆಹತಾಬ್ ಜೊತೆಗೂಡಿ ಯಾತ್ರೆ ಆರಂಭಿಸಿದ್ದೇನೆ. ಇಬ್ಬರ ಮನೆಯವರೆಲ್ಲರೂ ನಮ್ಮೀ ಯಾತ್ರೆ ಕನಸಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಬಿಲಾಲ್.

ದಿನವೊಂದಕ್ಕೆ 350 ರೂಪಾಯಿಯಂತೆ ಸುಮಾರು 35 ಸಾವಿರ ರೂಪಾಯಿ ವೆಚ್ಚದಲ್ಲಿ ಪಾದಯಾತ್ರೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ದುಡಿಮೆಯಿಂದ ಗಳಿಸಿದ ಹಣವಲ್ಲದೆ ವೆಚ್ಚವನ್ನು ಕೆಲ ಗೆಳೆಯರು ಭರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಮೆಹತಾಬ್ ವಾರ್ತಾಭಾರತಿಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News