ಲಾರ್ಡ್ಸ್‌ನಲ್ಲಿ ಕಪಿಲ್ ದೇವ್ ಅವರ 39 ವರ್ಷ ಹಳೆಯ ದಾಖಲೆ ಮುರಿದ ಮುಹಮ್ಮದ್ ಸಿರಾಜ್

Update: 2021-08-17 12:02 GMT
photo : PTI

ಲಂಡನ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕ್ರಿಕೆಟ್ ದಿಗ್ಗಜ  ಕಪಿಲ್ ದೇವ್ ಅವರ 39 ವರ್ಷ ಹಳೆಯದಾದ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ಸೋಮವಾರ ಕೊನೆಗೊಂಡಿರುವ  ಎರಡನೇ ಟೆಸ್ಟ್ ನಲ್ಲಿ ಹೈದರಾಬಾದ್ ಬೌಲರ್ ಈ ಸಾಧನೆ ಮಾಡಿದ್ದಾರೆ. ಐತಿಹಾಸಿಕ ಕ್ರೀಡಾಂಗಣ ಲಾರ್ಡ್ಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಭಾರತದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಸಾಮೂಹಿಕ ಪ್ರಯತ್ನದ ಫಲವಾಗಿ ಲಾರ್ಡ್ಸ್‌ನಲ್ಲಿ ಭಾರತವು ಸೋಮವಾರ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಎರಡೂ ಇನ್ನಿಂಗ್ಸ್‌ಗಳಲ್ಲಿ ನಾಲ್ಕು ವಿಕೆಟ್ ಗಳ ಗೊಂಚಲು  ಕಬಳಿಸುವ  ಮೂಲಕ ಸಿರಾಜ್  ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

 ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಸಿರಾಜ್ 126 ರನ್ ನೀಡಿ ಒಟ್ಟು 8 ವಿಕೆಟ್ ಗಳನ್ನು ಕಬಳಿಸಿದರು. ಈ ಮೂಲಕ  ಅವರು ಕಪಿಲ್ ದೇವ್ ಅವರ ಬೌಲಿಂಗ್ ದಾಖಲೆಯನ್ನು ಮೀರಿ ಲಾರ್ಡ್ಸ್‌ನಲ್ಲಿ ಭಾರತದ ಪರ ಶ್ರೇಷ್ಠ ಪ್ರದರ್ಶನ ದಾಖಲಿಸಿದರು.1982ರಲ್ಲಿ ಕಪಿಲ್ ದೇವ್ 8 ವಿಕೆಟ್ ಗಳನ್ನು ಪಡೆದಿದ್ದರೂ 168 ರನ್ ಬಿಟ್ಟುಕೊಟ್ಟಿದ್ದರು.

27 ರ ಹರೆಯದ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ 30 ಓವರ್ ಗಳಲ್ಲಿ 7 ಮೇಡನ್ ಸಹಿತ 94 ರನ್ ಗೆ 4 ವಿಕೆಟ್ ಗಳನ್ನು ಪಡೆದರು. ಎರಡನೇ ಇನ್ನಿಂಗ್ಸ್ ನಲ್ಲೂ ಇಂಗ್ಲೆಂಡ್ ಆಟಗಾರರನ್ನು ಕಾಡಿದ ಸಿರಾಜ್  10.5 ಓವರ್ ಗಳಲ್ಲಿ 3 ಮೇಡನ್ ಸಹಿತ 32 ರನ್ ಗೆ 4  ವಿಕೆಟ್ ಗಳನ್ನು ಪಡೆದರು.

ಎರಡೂ  ಇನ್ನಿಂಗ್ಸ್‌ಗಳಲ್ಲಿ ಇಂಗ್ಲೆಂಡ್‌ನ ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದಲ್ಲದೆ, ಸಿರಾಜ್ ಇಂಗ್ಲೆಂಡ್‌ನ ಬ್ಯಾಟಿಂಗ್‌ನಲ್ಲಿ ಸತತ ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿ ಗಮನ ಸೆಳೆದರು. ಮೊದಲ ಇನಿಂಗ್ಸ್‌ನಲ್ಲಿ, ಸಿರಾಜ್  ಅವರು ಡೊಮಿನಿಕ್ ಸಿಬ್ಲಿ ಹಾಗೂ ಹಸೀಬ್ ಹಮೀದ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು ಹಾಗೂ  ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಮೊಯೀನ್ ಅಲಿ ಹಾಗೂ  ಸ್ಯಾಮ್ ಕರ್ರನ್ ಅವರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್ ಗೆ ಅಟ್ಟಿದರು.

ಲಾರ್ಡ್ಸ್‌ನಲ್ಲಿ ಭಾರತದ ಬೌಲರ್ ಗಳ ಅತ್ಯುತ್ತಮ ಸಾಧನೆ

ಬೌಲರ್                     ಬೌಲಿಂಗ್ ಪ್ರದರ್ಶನ                 ವರ್ಷ

ಮುಹಮ್ಮದ್ ಸಿರಾಜ್              8/126                            2021

ಕಪಿಲ್ ದೇವ್                        8/168                         1982

ಆರ್. ಪಿ. ಸಿಂಗ್                     7/117                          2007

ವೆಂಕಟೇಶ್ ಪ್ರಸಾದ್               7/130                             1996

ಇಶಾಂತ್ ಶರ್ಮಾ                  7/135                             2014

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News