ಮೂಡುಬಿದಿರೆ: ಪತ್ನಿಯ ಹೊಡೆದು ಕೊಲೆ; ಆರೋಪಿ ಪತಿಯ ಬಂಧನ

Update: 2021-08-18 06:04 GMT
ಸುನೀತಾ

ಮೂಡುಬಿದಿರೆ, ಆ.18: ಪತಿ-ಪತ್ನಿಯ ಜಗಳ ಪತ್ನಿಯ ಹತ್ಯೆಯೊಂದಿಗೆ ಕೊನೆಗೊಂಡ ಘಟನೆ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಮಂಗಳವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಮಠ ನಿವಾಸಿ ಸುನೀತಾ(30) ಕೊಲೆಯಾದವರು. ಇವರ ಪತಿ ಮೂಡುಬಿದಿರೆಯ ದಿನ್ ರಾಜ್ ಕೊಲೆ ಆರೋಪಿಯಾಗಿದ್ದು, ಆತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಸಂಜೆಯ ವೇಳೆ ಪತಿ- ಪತ್ನಿ ಮಧ್ಯೆ ಜಗಳ ನಡೆದಿದ್ದು, ಈ ಸಂದರ್ಭ ದಿನ್ ರಾಜ್ ಯಾವುದೋ ಮೊಂಡಾದ ಆಯುಧದಿಂದ ಪತ್ನಿಯ ತಲೆಗೆ ಮಾರಣಾಂತಿಕವಾಗಿ ಹೊಡೆದಿದ್ದಾನೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುನೀತಾ ಕುಸಿದು ಬಿದ್ದಿದ್ದಾರೆ. ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ವಿಷಯ ಅರಿತ ಬಳಿಕ ಮನೆಮಂದಿ ಹಾಗೂ ಸ್ಥಳೀಯರು ತಕ್ಷಣ ಸುನೀತಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಸುನೀತಾ ಮಧ್ಯರಾತ್ರಿ 12:20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಆರೋಪಿ ದಿನ್ ರಾಜ್ ನನ್ನು ಇಂದು ಮುಂಜಾನೆ ಬಂಧಿಸಿದ್ದಾರೆ.

ಬಡ ಕುಟುಂಬದಲ್ಲಿ‌ ಹುಟ್ಟಿದ್ದ ಸುನೀತಾ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಒಂದೂವರೆ ವರ್ಷಗಳ ಹಿಂದೆ ಸಂಬಂಧಿಕರು ಸೇರಿ ಮದುವೆ ಮಾಡಿಸಿದ್ದರು. ತಾಯಿ ಒಬ್ಬರೇ ಮನೆಯಲ್ಲಿ ಇದ್ದುದರಿಂದ ಸುನೀತಾ ಅಲ್ಲಿಯೇ ಉಳಿದುಕೊಂಡಿದ್ದು, ದಿನ್ ರಾಜ್ ಕೂಡಾ ಅಲ್ಲಿಯೇ ಇದ್ದು ಮೂಡುಬಿದಿರೆಯ ಬ್ಯಾಟರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News