ತೋಟದಲ್ಲಿ ಬೆಳೆದ ಮರ ಕಡಿದು ಮಾರಾಟಕ್ಕೆ ಕಾನೂನು ಸರಳೀಕರಣ: ಸಚಿವೆ ಶೋಭಾ ಕರಂದ್ಲಾಜೆ

Update: 2021-08-19 11:46 GMT

ಉಡುಪಿ, ಆ.19: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಅರಣ್ಯ ಯೋಜನೆಗೆ ಕರ್ನಾಟಕದಲ್ಲಿ ಈವರೆಗೆ ತಿದ್ದುಪಡಿ ಆಗಿಲ್ಲ. ಈ ನಿಟ್ಟಿನಲ್ಲಿ ಶ್ರೀಗಂಧ ಸೇರಿದಂತೆ ಯಾವುದೇ ಮರಗಳನ್ನು ಬೆಳೆಸಲು ಮತ್ತು ಅದನ್ನು ಕಡಿದು ಸಾಗಿಸಿ ಮಾರಾಟ ಮಾಡಲು ಕಾನೂನು ಸರಳೀಕರಣಗೊಳಿಸುವ ಕಾರ್ಯ ಶೀಘ್ರವೇ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಉಡುಪಿ ಪುರಭವನದಲ್ಲಿ ಹಮ್ಮಿಕೊಳ್ಳಲಾದ ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಸದ್ಯ ತೋಟದಲ್ಲಿ ಬೆಳೆದ ಮರವನ್ನು ಕಡಿದು ಸಾಗಿಸಿ ಮಾರಾಟ ಮಾಡಲು ಅವಕಾಶ ಇಲ್ಲ. ಇಂತಹ ಕಠಿಣ ಕಾನೂನು ಕರ್ನಾಟಕ ಹೊರತು ಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ಈ ಕಾನೂನು ಸರಳಗೊಳಿಸಿ ಜಾರಿಗೆ ತರುವಂತೆ ರಾಜ್ಯ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಖಾದ್ಯ ತೈಲದಲ್ಲಿ ಭಾರತ ಇನ್ನು ಸ್ವಾಲಂಬಿಯಾಗಿಲ್ಲ. ಭಾರತ ಈ ವರ್ಷ ಒಟ್ಟು 305 ಮಿಲಿಯನ್ ಮೆಟ್ರಿಕ್ ಟನ್ ಬೇಳೆಕಾಳು, ಅಕ್ಕಿ, ಗೋದಿಯನ್ನು ಮತ್ತು 326 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿಯನ್ನು ಉತ್ಪಾದಿಸಿದೆ. ಆದರೂ ಭಾರತ ಇಂದಿಗೂ ಶೇ.80ರಷ್ಟು ಖಾದ್ಯ ತೈಲವನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಖಾದ್ಯ ತೈಲದಲ್ಲಿ ಸ್ವಾಲಂಬಿ ಯಾಗಲು ರೈತರಿಗೆ ಉಚಿತವಾಗಿ ಎಣ್ಣೆ ಕಾಳಿನ ವಿತರಣೆ, ಮಾರುಕಟ್ಟೆ ನೆರವು, ಹೊಸ ತಂತ್ರಜ್ಞಾನ ಅಳವಡಿಸಲು ಸರಕಾರ ನೆರವು ನೀಡಲಿದೆ ಎಂದರು.

ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಬಜೆಟ್‌ನಲ್ಲಿ ಕೃಷಿಗೆ 21,000 ಕೋಟಿ ರೂ. ಮೀಸಲಿಟ್ಟರೆ, ಕೇವಲ ಆರು ವರ್ಷಗಳ ನಂತರ ಬಿಜೆಪಿ ಸರಕಾರ ಕೃಷಿಗೆ 1.30ಲಕ್ಷ ಕೋಟಿ ರೂ. ತೆಗೆದಿರಿಸಿದೆ. ದೇಶದಲ್ಲಿ ಶೇ.80ರಷ್ಟು ಇರುವ ಸಣ್ಣ ಮತ್ತು ಮಧ್ಯಮ ರೈತರನ್ನು ಒಟ್ಟು ಸೇರಿಸಲು 10 ಸಾವಿರ ಕೃಷಿ ಉತ್ಪಾದಕರ ಸಂಘಗಳನ್ನು ಆರಂಭಿಸಲು ಸರಕಾರ ಚಿಂತನೆ ಮಾಡುತ್ತಿದೆ. ಹೀಗೆ ಇವರ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 6500ಕೋಟಿ ರೂ. ಅನುದಾನ ನೀಡಿದೆ ಎಂದು ಅವರು ಹೇಳಿದರು.

ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಹಾಗೂ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News