ತೆಂಗಿನ ಪದಾರ್ಥಗಳ ಮೇಲಿನ ರಫ್ತು ನಿಷೇಧ ತೆರವು: ಸಚಿವೆ ಶೋಭಾ

Update: 2021-08-19 14:31 GMT

ಉಡುಪಿ, ಆ.19: ತೆಂಗು ಅಭಿವೃದ್ಧಿ ಮಂಡಳಿಗೆ ಅಧಿಕಾರಿಗಳ ಬದಲು ತೆಂಗು ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಂಡಿದೆ. ತೆಂಗು ಹಾಗೂ ಅದರ ಪದಾರ್ಥಗಳ ರಫ್ತಿಗೆ ಇದ್ದ ನಿಷೇಧವನ್ನು ತೆರವುಗೊಳಿಸಲಾಗಿದ್ದು, ಇನ್ನು ಮುಂದೆ ಯಾವುದೇ ಯಾವುದೇ ತೆಂಗಿನ ಪದಾರ್ಥವನ್ನು ರಫ್ತು ಮಾಡಬಹುದಾಗಿದೆ. ಇದರಿಂದ ಮುಂದೆ ತೆಂಗಿನ ಮಾರುಕಟ್ಟೆ ಕೂಡ ಹೆಚ್ಚಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟ್ಯಾಕ್ಟರ್‌ಗಳ ಮಾರಾಟ ದರದಲ್ಲಿ ಮೋಸ ಆಗದಂತೆ ದರ ಪಟ್ಟಿಯನ್ನು ವೆಬ್‌ಸೈಟ್‌ಗಳಲ್ಲಿ ಪ್ರದರ್ಶನ ಮಾಡುವಂತೆ ಡೀಲರ್ಸ್‌ ಹಾಗೂ ಕೃಷಿ ಇಲಾಖೆ ಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಸಿಂಚನ ಯೋಜನೆಯಡಿ ಕರ್ನಾಟಕಕ್ಕೆ 300ಕೋಟಿ ರೂ. ಬಿಡುಗಡೆಯಾಗಿದ್ದು, ಈ ವರ್ಷ 500 ಕೋಟಿ ರೂ. ಬರಲಿದೆ ಎಂದು ಮಾಹಿತಿ ನೀಡಿದರು.

2023 ಸಿರಿಧಾನ್ಯಳ ವರ್ಷ 

ವಿಶ್ವಸಂಸ್ಥೆಯು 2023ನ್ನು ಸಿರಿಧಾನ್ಯಗಳ ವರ್ಷ ಎಂಬುದಾಗಿ ಘೋಷಿಸಿದೆ. ಈ ವರ್ಷ ಅತ್ಯಂತ ಹೆಚ್ಚು ಸಿರಿಧಾನ್ಯ ಕರ್ನಾಟಕ ರಾಜ್ಯದಲ್ಲಿ ಬೆಳೆದರೆ, ಅತ್ಯಂತ ಹೆಚ್ಚು ರಫ್ತು ಆಗಿರುವುದು ಉತ್ತರಖಂಡ್ ರಾಜ್ಯದಿಂದ. ಈಶಾನ್ಯ ರಾಜ್ಯಗಳಲ್ಲಿ ಶೇ.100 ಸಾವಯವ ಕೃಷಿ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚಿನ ಬೇಡಿಕೆ ಗಳಿರುವುದರಿಂದ ಎಲ್ಲ ವಿದೇಶಿ ಕಂಪೆನಿಗಳು ಇವುಗಳನ್ನು ಖರೀದಿಸುತ್ತಿದೆ. ಇದರಿಂದ ಕೃಷಿಕರಿಗೆ ಲಾಭವಾಗುತ್ತಿದೆ. ಈ ರೀತಿಯ ಪ್ರಯೋಗಗಳನ್ನು ಇಲ್ಲಿ ಕೂಡ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಎಫ್‌ಎಓನಲ್ಲಿ ಕಾಪು, ಉಡುಪಿ, ಕಾರ್ಕಳ ಕುಂದಾಪುರ ತಾಲೂಕುಗಳ ನೋಂದಾಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಿಂದ ಈ ಮೂಲಕ ಕೃಷಿಗೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತದೆ. ಅಡಿಕೆ ಬೆಳೆ ವಿಚಾರವು ಸುಪ್ರೀಂ ಕೋರ್ಟಿನಲ್ಲಿದ್ದು, ಇದರ ರಕ್ಷಣೆಗೆ ಒಳ್ಳೆಯ ವಕೀಲರ ನೇಮಕ ಮಾಡುವಂತೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಎಥೆನಾಲ್ ಉತ್ಪಾದನೆಗೆ ಆದ್ಯತೆ

ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರಕಾರ ಆದ್ಯತೆ ನೀಡಲು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಯಾವ ರೀತಿ ನೆರವು ನೀಡಬಹುದು ಎಂಬುದರ ಬಗ್ಗೆ ಮುಂದಿನ ದಿಗಳಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗು ವುದು. ಕರಾವಳಿಯಲ್ಲಿ ಐಎನ್‌ಎ ಶಾಖೆ ಸ್ಥಾಪಿಸುವ ಕುರಿತು ಸರಕಾರ ಜೊತೆ ಮಾತುಕತೆ ನಡೆಸಲಾುವುದು ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲೆ ಸೇರಿದಂತೆ ಆಯಾ ಜಿಲ್ಲೆಗಳಿಗೆ ಕೃಷಿ ಇಲಾಖೆಗೆ ಸಂಬಂಧಿಸಿ ಯಾವ ಕಾರ್ಯಗಳು ಆಗಬೇಕೆಂಬುದರ ಬಗ್ಗೆ ಚರ್ಚಿಸಲು ರಾಜ್ಯ ಮತ್ತು ಕೇಂದ್ರ ಅಧಿಕಾರಿಗಳ ಸಭೆಯನ್ನು ಆ.27ರಂದು ಕರೆಯಲಾಗಿದೆ. ಮುಂದೆ ಅಧಿಕಾರಿಗಳ ಜೊತೆ ಪ್ರವಾಸ ಮಾಡಿ ಆಯಾ ಜಿಲ್ಲೆಗಳ ಸಮಸ್ಯೆ ಹಾಗೂ ಬೇಡಿಕೆ ಗಳನ್ನು ಅರಿತುಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜ ಗೌಡ, ಉದಯ ಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು.

10,000 ಕೃಷಿ ಉತ್ಪಾದಕರ ಸಂಘ

ದೇಶದಲ್ಲಿ ಶೇ.80ರಷ್ಟು ಇರುವ ಸಣ್ಣ ಮತ್ತು ಮಧ್ಯಮ ರೈತರನ್ನು ಒಟ್ಟು ಸೇರಿಸುವ ಉದ್ದೇಶದಿಂದ 10ಸಾವಿರ ಕೃಷಿ ಉತ್ಪಾದಕರ ಸಂಘಗಳನ್ನು ಸ್ಥಾಪಿಸಲು ಸರಕಾರ ಸಂಕಲ್ಪ ಮಾಡಿದೆ. ಪ್ರತಿ ಬ್ಲಾಕ್‌ಗೆ ಒಂದರಂತೆ ಸಂಘವನ್ನು ಮಾಡ ಲಾಗುವುದು. ಈ ಮೂಲಕ ರೈತರ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರಕಾರ ಸಹಾಯಧನ ಹಾಗೂ ಸಾಲಸೌಲಭ್ಯವನ್ನು ನೀಡಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಈ ಬಾರಿ ಭಾರತದಲ್ಲಿ ಹೆಚ್ಚಿನ ಆಹಾರ ಉತ್ಪಾದನೆ ಮಾಡಿರುವುದರಿಂದ ಸಾಕಷ್ಟು ಆಹಾರಗಳು ಹಾಳಾಗಿವೆ. ಇವುಗಳನ್ನು ರಪ್ತು ಮಾಡಲು ಆದ್ಯತೆ ನೀಡುವ ಕ್ಲಸ್ಟರ್‌ಗಳು ನಮ್ಮಲ್ಲಿ ಬಹಳ ಕಡಿಮೆ ಇದೆ. ಮುಂದೆ ಆದ್ಯತೆ ಮೇರೆಗೆ ಆಯಾ ಜಿಲ್ಲೆ ತಕ್ಕಂತೆ ಕ್ಲಸ್ಟರ್‌ಗಳನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು  ವಿಶೇಷ ಒತ್ತು ನೀಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News