ಸಿಇಟಿ ಪರೀಕ್ಷೆಗೆ 3,624 ಅಭ್ಯರ್ಥಿಗಳು: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2021-08-19 15:09 GMT

ಉಡುಪಿ, ಆ.19: ಜಿಲ್ಲೆಯಲ್ಲಿ ಇದೇ ಆಗಸ್ಟ್ 28 ಮತ್ತು 29ರಂದು ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗಳು ಉಡುಪಿಯ 5, ಕುಂದಾಪುರದ 3 ಮತ್ತು ಕಾರ್ಕಳದ 2 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಒಟ್ಟು 10 ಪರೀಕ್ಷಾ ಕೇಂದ್ರ ಗಳಲ್ಲಿ ನಡೆಯಲಿದೆ. ಒಟ್ಟು 3,624 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗ ಲಿದ್ದು, ಪರೀಕ್ಷೆಯು ಅತ್ಯಂತ ಸುವ್ಯವಸ್ಥಿತವಾಗಿ ನಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ..ಜಗದೀಶ್ ಸೂಚಿಸಿದ್ದಾರೆ.

ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಿಇಟಿ ಪರೀಕ್ಷೆ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕೋವಿಡ್-19 ಸನ್ನಿವೇಶದಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಆರೋಗ್ಯ ಇಲಾಖೆ ಸೂಚಿಸಿರುವ ಎಲ್ಲಾ ಎಸ್‌ಓಪಿ ಅಂಶಗಳನ್ನು ಪಾಲಿಸಿ ಪರೀಕ್ಷೆಯನ್ನು ಆಯೋಜಿಸಬೇಕು. ಕೆಮು,ಶೀತ,ಜ್ವರ ಲಕ್ಷಣಗಳನ್ನು ಹೊಂದಿರುವ ವಿದ್ಯಾರ್ಥಿ ಗಳಿಗೆ ಮತ್ತು ಕಂಟೈನ್‌ಮೆಂಟ್ ಝೋನ್‌ಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷಾ ದ್ವಾರದಲ್ಲೇ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರಿಶೀಲಿಸಲು ಅಗತ್ಯ ಸಿಬ್ಬಂದಿ ನಿಯೋಜಿ ಸುವಂತೆ ಸೂಚನೆ ನೀಡಿದರು.

ಕೋವಿಡ್‌ನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಹಾಗೂ ಪರೀಕ್ಷಾ ಕೇಂದ್ರಕ್ಕೆ ಬರಲು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗುವುದು. ಅಂತಹ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ದೂ.ಸಂ.9845953978 (ಗಿರೀಶ್) ಹಾಗೂ 9448416987(ಮಂಜುನಾಥ ಭಟ್) ಇವರ ಬಳಿ ಮುಂಚಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಪರೀಕ್ಷೆ ಆರಂಭಕ್ಕೆ ಮುಂಚೆ ಮತ್ತು ಪರೀಕ್ಷೆಯ ನಂತರ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಹಾಗೂ ಅಲ್ಲಿನ ಶೌಚಾಲಯಗಳನ್ನು ಸ್ಯಾನಟೈಸ್ ಮಾಡುವ ಕುರಿತಂತೆ ಸಂಬಂದಪಟ್ಟ ಸ್ಥಳೀಯ ನಗರಾಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪರೀಕ್ಷಾ ಕೇಂದ್ರಗಳಿಗೆ ಮತ್ತು ಪ್ರಶ್ನೆ ಪತ್ರಿಕೆ ಸಾಗಾಟ ವಾಹನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಡಿಡಿಪಿಐ ಎನ್.ಹೆಚ್.ನಾಗೂರ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News