ಇಂಗ್ಲೀಷ್ ನಲ್ಲಿ ಮಾತ್ರ ಪ್ರತಿಕ್ರಿಯೆ ನೀಡಿ: ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

Update: 2021-08-19 17:21 GMT

ಮಧುರೈ, ಆ. 19: ಅಧಿಕೃತ ಭಾಷೆಗಳ ಕಾಯ್ದೆ-1963ರ ನಿಯಮಾವಳಿಗಳನ್ನು ಕಟ್ಟುನಿಟ್ಟಿನಲ್ಲಿ ಅನುಸರಿಸಿ ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠ ಕೇಂದ್ರ ಸರಕಾರಕ್ಕೆ ಗುರುವಾರ ನಿರ್ದೇಶಿಸಿದೆ. ಒಮ್ಮೆ ಇಂಗ್ಲೀಷ್‌ನಲ್ಲಿ ಅರ್ಜಿ ಸಲ್ಲಿಸಿದರೆ, ಇಂಗ್ಲೀಷಿನಲ್ಲಿಯೇ ಉತ್ತರ ನೀಡುವುದು ಕೇಂದ್ರ ಸರಕಾರದ ಕರ್ತವ್ಯ ಎಂದು ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿ ಎನ್. ಕಿರುಬಾಕರನ್ ಹಾಗೂ ಎಂ. ದೊರೈಸ್ವಾಮಿ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಕೇಂದ್ರ ಹಾಗೂ ರಾಜ್ಯ ಸರಕಾರ, ಸಂಸದರ, ಜನರ ನಡುವಿನ ಎಲ್ಲ ಸಂವಹನದಲ್ಲಿ ಇಂಗ್ಲೀಶ್ ಅನ್ನು ಮಾತ್ರ ಬಳಸಬೇಕು ಎಂದು ನಿರ್ದೇಶಿಸುವಂತೆ ಕೋರಿ ಮಧುರೈಯ ಲೋಕಸಭಾ ಸಂಸದ ಸು. ವೆಂಕಟೇಶನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಈ ನಿರ್ದೇಶನ ನೀಡಿತು. ಕಳೆದ ವರ್ಷ ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವ ಸಂಸದ ವೆಂಕಟೇಶನ್ ಅವರ ಪತ್ರಕ್ಕೆ ಹಿಂದಿಯಲ್ಲಿ ಮಾತ್ರ ಉತ್ತರಿಸಿದ ಬಳಿಕ ವೆಂಕಟೇಶನ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸಿಆರ್‌ಪಿಎಫ್ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ರೂಪಿಸುವಂತೆ ಕೋರಿ ವೆಂಕಟೇಶನ್ ಪತ್ರ ಬರೆದಿದ್ದರು.

ರಾಜ್ಯಗಳನ್ನು ಭಾಷೆಯ ಮೂಲಕ ಪುನಾರಚನೆ ಮಾಡಿರುವುದರಿಂದ ಭಾಷೆಯ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳಬಹುದು. ಕೇಂದ್ರ ಸರಕಾರ ಸಂವಹನಕ್ಕೆ ಹಿಂದಿಯೊಂದಿಗೆ ಇಂಗ್ಲೀಷನ್ನು ಕೂಡ ಬಳಸಬೇಕು. ಅದು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂದು ನ್ಯಾಯಮೂರ್ತಿ ಕಿರುಬಾಕರನ್ ಹೇಳಿದರು. ಸಂಸದರ ಪತ್ರಕ್ಕೆ ಕೇಂದ್ರ ಸರಕಾರ ಪ್ರಮಾದವಶಾತ್ ಹಿಂದಿಯಲ್ಲಿ ಮಾತ್ರ ಪ್ರತಿಕ್ರಿಯೆ ನೀಡಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವುದು ಅಲ್ಲ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News