ವಾಪಸ್ಸಾತಿ ಕಾರ್ಯಾಚರಣೆಗೆ ತಡೆ ವಿರುದ್ಧ ತಾಲಿಬಾನ್‌ಗೆ ಅಮೆರಿಕ ಎಚ್ಚರಿಕೆ

Update: 2021-08-21 04:24 GMT
ಜೋ ಬೈಡೆನ್ (Photo credit: PTI)

ವಾಷಿಂಗ್ಟನ್, ಆ.21: ಗಲಭೆಗ್ರಸ್ತ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪಡೆಗಳ ಮೇಲೆ ತಾಲಿಬಾನ್ ಯಾವುದೇ ದಾಳಿ ನಡೆಸಿದಲ್ಲಿ ಅಥವಾ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ನರ ವಾಪಸ್ಸಾತಿ ಪ್ರಕ್ರಿಯೆಗೆ ತಡೆ ಉಂಟು ಮಾಡಿದಲ್ಲಿ ಅದು "ಕ್ಷಿಪ್ರ ಮತ್ತು ಬಲಪ್ರಯೋಗದ ಪ್ರತಿಕ್ರಿಯೆ"ಯನ್ನು ಆಹ್ವಾನಿಸಿದಂತಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಜತೆಗೆ ಮಿತ್ರರಾಷ್ಟ್ರಗಳ ಜತೆ ಸೇರಿ ತಮ್ಮ ಆಡಳಿತ ಭಯೋತ್ಪಾದನೆ ನಿಗ್ರಹ ಮಿಷನ್‌ನತ್ತ ಗಮನ ಕೇಂದ್ರೀಕರಿಸಲಿದೆ ಎಂದು ಬೈಡೆನ್ ಘೋಷಿಸಿದ್ದಾರೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಪ್ರತಿಪಾದಕ ಸಂಘಟನೆಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಸಬಹುದಾದ ಯಾವುದೇ ದಾಳಿಯ ಬಗ್ಗೆಯೂ ಅಮೆರಿಕ ನಿಗಾ ವಹಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಯಾವುದೇ ದಾಳಿ, ನಮ್ಮ ಪಡೆಗಳ ಮೇಲೆ ಯಾವುದೇ ದಾಳಿ ಅಥವಾ ವಿಮಾನ ನಿಲ್ದಾಣದಲ್ಲಿ ನಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಕ್ಷಿಪ್ರ ಮತ್ತು ಬಲಪ್ರಯೋಗದ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ತಾಲಿಬಾನ್‌ಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ" ಎಂದು ಜೋ ಬೈಡೆನ್ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

"ಇತರ ಎಲ್ಲ ಮಿತ್ರದೇಶಗಳ ಜತೆಗೂಡಿ ಭಯೋತ್ಪಾದನೆ ನಿಗ್ರಹ ಮಿಷನ್‌ಗೆ ಗಮನ ಕೇಂದ್ರೀಕರಿಸುವುದು ಮುಂದುವರಿಸಲಿದ್ದೇವೆ. ಮಿತ್ರ ದೇಶಗಳ ಜತೆ ಮತ್ತು ಈ ಪ್ರದೇಶದಲ್ಲಿ ಸ್ಥಿರತೆಯನ್ನು ಖಾತರಿಪಡಿಸುವ ಆಸಕ್ತಿ ಹೊಂದಿದ ಪಾಲುದಾರರ ಜತೆ ನಿಕಟ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದ್ದೇವೆ" ಎಂದು ವಿವರಿಸಿದರು.

ಅಮೆರಿಕ ಅಥವಾ ಮಿತ್ರದೇಶಗಳ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಅಫ್ಘಾನಿಸ್ತಾನವನ್ನು ನೆಲೆಯಾಗಿಸುವುದನ್ನು ತಡೆಯುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಅಂತೋನಿ ಬ್ಲಿಂಕೆನ್ ಶುಕ್ರವಾರ ನ್ಯಾಟೊ ಮಿತ್ರದೇಶಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದಾರೆ ಎಂದೂ ಬಹಿರಂಗಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News