ಉದ್ಯೋಗಗಳಿಗೆ ‘ಸಮಾನ ವಿದ್ಯಾರ್ಹತೆ ’ಗೆ ಸರ್ವೋಚ್ಚ ನ್ಯಾಯಾಲಯದ ಒಪ್ಪಿಗೆ

Update: 2021-08-21 17:57 GMT

ಹೊಸದಿಲ್ಲಿ,ಆ.21: ಉದ್ಯೋಗಾವಕಾಶದ ಅಧಿಸೂಚನೆಯನ್ನು ಹೊರಡಿಸಿದ ಸಂದರ್ಭದಲ್ಲಿ ಅಭ್ಯರ್ಥಿಯು ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ನಿಯಮದಿಂದ ದೂರ ಸರಿದಿರುವ ಸರ್ವೋಚ್ಚ ನ್ಯಾಯಾಲಯವು,ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ‘ಸಮಾನ ವಿದ್ಯಾರ್ಹತೆ ’ಯೂ ಉದ್ಯೋಗಕ್ಕೆ ಪರಿಗಣಿಸಲು ಅಷ್ಟೇ ಯೋಗ್ಯವಾಗಿದೆ ಎಂದು ಹೇಳಿದೆ.

‘ನಮ್ಮ ಅಭಿಪ್ರಾಯದಲ್ಲಿ ಮೇಲ್ಮನವಿದಾರರು ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ಸಮಾನ ವಿದ್ಯಾರ್ಹತೆಯನ್ನು ಹೊಂದಿದ್ದರಿಂದ ಉದ್ಯೋಗಾವಕಾಶದ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕದಂದು ಅಭ್ಯರ್ಥಿಯು ಆ ಹುದ್ದೆಗೆ ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬ ಸೇವಾ ನ್ಯಾಯಶಾಸ್ತ್ರದ ನಿಯಮವನ್ನು ಅವರ ಪ್ರಕರಣಗಳಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರ ಪೀಠವು ತನ್ನ ಇತ್ತೀಚಿನ ತೀರ್ಪಿನಲ್ಲಿ ತಿಳಿಸಿದೆ.

ಕೇರಳದಲ್ಲಿ ಪ್ರೌಢಶಾಲಾ ಸಹಾಯಕ ಶಿಕ್ಷಕರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದ ಪ್ರವೀಣ ಕುಮಾರ ಪಿ. ಮತ್ತು ಪಿ.ಅನಿತಾ ದೇವಿ ಅವರ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ.

ನಿರ್ದಿಷ್ಟ ವಿಷಯಗಳಲ್ಲಿ ಬಿ.ಎಡ್.ಪದವಿಗಳು 2012ರಲ್ಲಿ ರಾಜ್ಯ ಲೋಕಸೇವಾ ಆಯೋಗವು ಹೊರಡಿಸಿದ್ದ ಉದ್ಯೋಗಾವಕಾಶ ಅಧಿಸೂಚನೆಯಲ್ಲಿನ ಅಗತ್ಯ ಮಾನದಂಡವನ್ನು ಪೂರೈಸಿವೆಯೇ ಎನ್ನುವುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು. ಹುದ್ದೆಗೆ ಪ್ರಕೃತಿ ವಿಜ್ಞಾನದಲ್ಲಿ ಬಿ.ಎಡ್.ಪದವಿಯನ್ನು ಅಪೇಕ್ಷಿಸಲಾಗಿತ್ತು. 

ಪ್ರವೀಣ್ ಕುಮಾರ್ ಮೈಸೂರು ವಿವಿಯಿಂದ ಮತ್ತು ಅನಿತಾ ದೇವಿ ಕೊಯಮತ್ತೂರಿನ ಭಾರತಿಯಾರ್ ವಿವಿಯಿಂದ ಜೀವವಿಜ್ಞಾನದಲ್ಲಿ ಬಿ.ಎಡ್. ಪದವಿಗಳನ್ನು ಪಡೆದಿದ್ದರು. ಜೀವವಿಜ್ಞಾನದಲ್ಲಿ ಅವರ ಪದವಿಗಳನ್ನು ಕೇರಳದ ವಿವಿಯೊಂದರಿಂದ ಪ್ರಕೃತಿ ವಿಜ್ಞಾನದಲ್ಲಿ ಪದವಿಗಳಿಗೆ ಸಮಾನವಾಗಿ ಪರಿಗಣಿಸಲಾಗಿತ್ತು. ಅವರಿಬ್ಬರನ್ನೂ ಉದ್ಯೋಗಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದ್ದು,‌ ಸಂದರ್ಶನದಲ್ಲಿ ಪಾಲ್ಗೊಳ್ಳಲೂ ಅವಕಾಶವನ್ನು ನೀಡಲಾಗಿತ್ತು.

ಅಧಿಸೂಚನೆಯಲ್ಲಿ ಕರೆಯಲಾಗಿದ್ದ ಹುದ್ದೆಗೆ ಅಗತ್ಯ ವಿದ್ಯಾರ್ಹತೆಯನ್ನು ಅವರು ಹೊಂದಿಲ್ಲವೆಂಬ ಆಕ್ಷೇಪಗಳು ವ್ಯಕ್ತವಾದಾಗ ಅವರ ಉಮೇದುವಾರಿಕೆಗಳನ್ನು ತಡೆಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರವೀಣ್ ಕುಮಾರ್ ಮತ್ತು ಅನಿತಾ ದೇವಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News