×
Ad

ಮಾಜಿ ಒಲಿಂಪಿಯನ್ ಫುಟ್ಬಾಲ್ ಆಟಗಾರ, ಕೋಚ್ ಸೈಯದ್ ಶಾಹಿದ್ ಹಕೀಮ್ ನಿಧನ

Update: 2021-08-22 12:09 IST
photo: The Indian express

ಹೊಸದಿಲ್ಲಿ: ಮಾಜಿ ಒಲಿಂಪಿಯನ್ ಫುಟ್ಬಾಲ್ ಆಟಗಾರ,ತರಬೇತುದಾರ ಹಾಗೂ  ಫಿಫಾ ರೆಫರಿ ಸೈಯದ್  ಶಾಹಿದ್ ಹಕೀಮ್ ರವಿವಾರ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳ ಹಿಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರನ್ನು ಕರ್ನಾಟಕದ ಗುಲ್ಬರ್ಗಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಫುಟ್ಬಾಲ್ ಆಟಗಾರನಿಗೆ ರವಿವಾರ ಬೆಳಿಗ್ಗೆ 8 ಗಂಟೆಗೆ ಹೃದಯ ಸ್ತಂಭನ ಉಂಟಾಯಿತು. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಭಾರತದ ಲೆಜೆಂಡರಿ ಫುಟ್ಬಾಲ್ ತರಬೇತುದಾರ ಎಸ್.ಎ. ರಹೀಮ್ ಅವರ ಪುತ್ರ ಹಕೀಮ್, 1960 ರೋಮ್ ಒಲಿಂಪಿಕ್ಸ್ ನಲ್ಲಿ ಆಡಿದ್ದ ಭಾರತೀಯ ಫುಟ್ಬಾಲ್ ತಂಡದ ಭಾಗವಾಗಿದ್ದರು. ಸುಮಾರು 25 ವರ್ಷಗಳ ಕಾಲ ಆಡಿದ ಹೈದರಾಬಾದ್ ಫುಟ್ಬಾಲ್ ಆಟಗಾರ  ಫಿಫಾ ರೆಫರಿಯಾದ್ದರು. ಖತರ್ ನಲ್ಲಿ 1988ರಲ್ಲಿ ನಡೆದಿದ್ದ  ಎಎಫ್ ಸಿ ಏಷ್ಯನ್ ಕಪ್ ಸೇರಿದಂತೆ 33 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು.

ಅವರು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ (ಸಾಯ್) ನೇಮಕಗೊಂಡ ರಾಷ್ಟ್ರೀಯ ತರಬೇತುದಾರರೂ ಆಗಿದ್ದರು. 2017 ರಲ್ಲಿ ಜೀವಮಾನ ಸಾಧನೆಗಾಗಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಯನ್ನು ಗೆದ್ದ ಎರಡನೇ ಫುಟ್ಬಾಲ್ ಆಟಗಾರ ಹಕೀಮ್. ಅವರು ಸಾಯ್ ನಲ್ಲಿ ಮುಖ್ಯ ಯೋಜನಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. ಅವರಿಗೆ ಕಳೆದ ವರ್ಷ ಕೋವಿಡ್ -19 ಇರುವುದು ದೃಢಪಟ್ಟಿತ್ತು. 

ತನ್ನ ಇಡೀ ಜೀವನವನ್ನು ಕ್ರೀಡೆಗೆ ಅರ್ಪಿಸಿದರೂ, ತಾನು ಸರಕಾರದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು 2020 ರಲ್ಲಿ ‘The Indian Express’ನೊಂದಿಗಿನ ಸಂವಾದದಲ್ಲಿ  ಹಕೀಮ್  ಹೇಳಿದ್ದರು. 

ಹಕೀಮ್ 1960 ರ ಸಂತೋಷ್ ಟ್ರೋಫಿ ವಿಜೇತ ಸರ್ವಿಸಸ್ ತಂಡದ ಸದಸ್ಯರಾಗಿದ್ದರು. ಭಾರತ ವಾಯುಪಡೆಯೊಂದಿಗೆ ನಂಟು ಹೊಂದಿದ್ದ ಹಕೀಮ್, ಸ್ಕ್ವಾಡ್ರನ್ ನಾಯಕರಾಗಿದ್ದರು. ಭಾರತೀಯ ರಾಷ್ಟ್ರೀಯ ತಂಡದ ಸಹಾಯಕ ತರಬೇತುದಾರರಾಗಿದ್ದರು. ಅವರು ಮಹೀಂದ್ರಾ ಆ್ಯಂಡ್ ಮಹೀಂದ್ರಾ ತರಬೇತುದಾರರಾಗಿದ್ದರು ಹಾಗೂ  1998-99ರಲ್ಲಿ ಅವರು ಡುರಾಂಡ್ ಕಪ್ ಗೆಲ್ಲಲು ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News