2014ರ ಬೀದಿ ನಾಟಕದ ಚಿತ್ರ ʼತಾಲಿಬಾನಿಗಳು ಮಹಿಳೆಯರನ್ನು ಮಾರುತ್ತಿದ್ದಾರೆʼ ಎಂಬ ಹೆಸರಿನಲ್ಲಿ ವೈರಲ್
ಹೊಸದಿಲ್ಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವಾರು ಸುದ್ದಿಗಳು ಮತ್ತು ಚಿತ್ರ, ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ. ಈ ನಡುವೆ ಮಹಿಳೆಯೋರ್ವರನ್ನು ಸರಪಳಿಯಿಂದ ಕಟ್ಟಿಹಾಕಿ ನಿಂತಿರುವ ಚಿತ್ರವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದ್ದು, ಮಹಿಳೆಯರನ್ನು ಲೈಂಗಿಕ ಗುಲಾಮರಾಗಿ ಬಳಸಲಾಗುತ್ತಿದೆ ಎಂದು ಈ ಚಿತ್ರವು ಹಂಚಿಕೆಯಾಗುತ್ತಿದೆ.
ಆದರೆ ಈ ಚಿತ್ರವು 2014ರಲ್ಲಿ ನಡೆಸಿದ್ದ ಪ್ರತಿಭಟನಾ ಬೀದಿ ನಾಟಕವಾಗಿತ್ತು ಎಂದು thequint.com ವರದಿ ಮಾಡಿದೆ. ʼಕಂಪಾಶನ್ ಫಾರ್ ಕುರ್ದಿಸ್ತಾನ್ʼ ಎಂಬ ಸಂಘಟನೆಯು 2014ರಲ್ಲಿ ʼಇಸ್ಲಾಮಿಕ್ ಸ್ಟೇಟ್ ಸೆಕ್ಸ್ ಸ್ಲೇವ್ಸ್ʼ ಎಂಬ ಈ ಬೀದಿ ನಾಟಕವನ್ನು ಭಯೋತ್ಪಾದಕ ಸಂಘಟನೆಯಾವ ಐಸಿಸ್ ಸಿರಿಯಾ ಮತ್ತು ಇರಾಕ್ ನಲ್ಲಿ ನಡೆಸುತ್ತಿರುವ ಕೃತ್ಯಗಳನ್ನು ಖಂಡಿಸುವ ಸಲುವಾಗಿ ಲಂಡನ್ ನಲ್ಲಿ ಹಮ್ಮಿಕೊಂಡಿತ್ತು.
ಕೃಪೆ: telegraf (screenshot)
ಮೊದಲಿ ಓರ್ವ ಫೇಸ್ ಬುಕ್ ಬಳಕೆದಾರ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದು, ಬಳಿಕ ಬಲಪಂಥೀಯ ವಿಚಾರವಾದಿಯಾಗಿರುವ ಶಿಫಾಲಿ ವೈದ್ಯ ಎಂಬಾಕೆಯೂ ಇದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಹಲವಾರು ಬಾರಿ ಸುಳ್ಳು ಸುದ್ದಿಗಳನ್ನು ಮತ್ತು ಅಪಪ್ರಚಾರಗಳನ್ನು ನೆಸಿರುವ ಆರೋಪವೂ ಈಕೆಯ ಮೇಲಿದೆ ಎಂದು thequint.com ತಿಳಿಸಿದೆ.