ವಿಶ್ವ ಅಥ್ಲೆಟಿಕ್ಸ್ ಅಂಡರ್ 20 ಚಾಂಪಿಯನ್‌ಶಿಪ್: ಲಾಂಗ್ ಜಂಪ್‌ನಲ್ಲಿ ಶೈಲಿ ಸಿಂಗ್ ಗೆ ಬೆಳ್ಳಿ ಪದಕ
ಹೊಸದಿಲ್ಲಿ: ಭಾರತದ ಶೈಲಿ ಸಿಂಗ್ ನೈರೋಬಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಅಂಡರ್ 20 ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 6.59 ಮೀ.ದೂರಕ್ಕೆ ಜಿಗಿದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ತನ್ನ ಶ್ರೇಷ್ಠ ಪ್ರಯತ್ನದಿಂದ ಬೆಳ್ಳಿ ಗೆದ್ದಿರುವ ಶೈಲಿ ಸಿಂಗ್ ಕೇವಲ 0.01 ಮೀಟರ್ ನಿಂದ ಚಿನ್ನದ ಪದಕದಿಂದ ವಂಚಿತರಾದರು. ಸ್ವೀಡನ್‌ನ ಮಜಾ ಅಸ್ಕಾಗ್ 6.60 ಮೀಟರ್ ಸಾಧನೆಯೊಂದಿಗೆ ಚಿನ್ನ ಗೆದ್ದರು. ಉಕ್ರೇನ್ ನ ಮಾರಿಯಾ ಹೋರಿಲೋವಾ ಕಂಚಿನ ಪದಕ ಪಡೆದರು.
ಅಂಡರ್ 20 ಚಾಂಪಿಯನ್‌ಶಿಪ್‌ನ ಈ ವರ್ಷದ ಆವೃತ್ತಿಯಲ್ಲಿ ಇದು ಭಾರತದ ಎರಡನೇ ಬೆಳ್ಳಿ ಪದಕ ಹಾಗೂ ಒಟ್ಟಾರೆ ಮೂರನೇ ಪದಕವಾಗಿದೆ.
ಅಂಡರ್ 20 ಚಾಂಪಿಯನ್‌ಶಿಪ್ ರವಿವಾರ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತದ ಮಹಿಳಾ 4x400ಮೀ. ರಿಲೇ ತಂಡವು ನಾಲ್ಕನೇ ಸ್ಥಾನವನ್ನು ಗಳಿಸಿತು.
ಶನಿವಾರ, ಭಾರತದ ಮಿಶ್ರ 4x400 ಮೀ. ರಿಲೇ ತಂಡ ಕಂಚಿನ ಪದಕ ಗೆದ್ದಿದ್ದರೆ ಅಮಿತ್ ಖತ್ರಿ 10,000 ಮೀಟರ್ ರೇಸ್ ವಾಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.