ಜಮ್ಮು-ಕಾಶ್ಮೀರದ ಜನರು ತಾಳ್ಮೆಗೆಟ್ಟರೆ ಇಲ್ಲಿಂದ ಕೇಂದ್ರ ಸರಕಾರವು ಮಾಯವಾಗಲಿದೆ: ಮೆಹಬೂಬಾ ಮುಫ್ತಿ

Update: 2021-08-22 15:52 GMT


ಶ್ರೀನಗರ,ಆ.22: ಅಫ್ಘಾನಿಸ್ತಾನದಲ್ಲಿಯ ಬಿಕ್ಕಟ್ಟಿನಂದ ಪಾಠ ಕಲಿತುಕೊಳ್ಳುವಂತೆ ಕೇಂದ್ರಕ್ಕೆ ಕಿವಿಮಾತು ಹೇಳಿರುವ ಪಿಡಿಪಿ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು,ಜಮ್ಮು-ಕಾಶ್ಮೀರದ ಜನರು ತಾಳ್ಮೆಯನ್ನು ಕಳೆದುಕೊಂಡರೆ ಈ ಕೇಂದ್ರಾಡಳಿತ ಪ್ರದೇಶದಿಂದ ಕೇಂದ್ರ ಸರಕಾರವು ‘ಮಾಯ’ವಾಗಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಶನಿವಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,‘ನಾನು ನಿಮಗೆ (ಕೇಂದ್ರ) ಪದೇ ಪದೇ ಹೇಳುತ್ತಿದ್ದೇನೆ. ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ. ಅರ್ಥ ಮಾಡಿಕೊಳ್ಳಿ ಮತ್ತು ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ ’ಎಂದು ಹೇಳಿದರು.

‘ನಮ್ಮ ನೆರೆಯಲ್ಲಿ (ಅಫ್ಘಾನಿಸ್ತಾನ) ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅಮೆರಿಕದಂತಹ ಬಲಾಢ್ಯ ಶಕ್ತಿಯೇ ಅಲ್ಲಿಂದ ಗಂಟುಮೂಟೆ ಕಟ್ಟಿಕೊಂಡು ಹೊರಬೀಳಬೇಕಾಯಿತು. ನಿಮಗೆ (ಕೇಂದ್ರ) ಈಗಲೂ ಅವಕಾಶವಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೊರಗಿನವರ (ಪಾಕಿಸ್ತಾನ) ಜೊತೆ ಮಾತುಕತೆಗಳನ್ನು ಆರಂಭಿಸಿದಂತೆ ನೀವೂ ಜಮ್ಮು-ಕಾಶ್ಮೀರದಲ್ಲಿ ಮಾತುಕತೆಗಳನ್ನು ಆರಂಭಿಸಬೇಕು ’ಎಂದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಆಗ್ರಹಿಸಿದ ಅವರು,‘ನೀವು ಕಾನೂನುಬಾಹಿರವಾಗಿ ಮತ್ತು ಅಸಾಂವಿಧಾನಿಕವಾಗಿ ನಮ್ಮಿಂದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡಿದ್ದೀರಿ. ಜಮ್ಮು-ಕಾಶ್ಮೀರದ ಅನನ್ಯತೆಯನ್ನು ತಿರುಚಿದ್ದೀರಿ ಮತ್ತು ಅದನ್ನು ತುಂಡುತುಂಡು ಮಾಡಿದ್ದೀರಿ. ತುಂಬ ವಿಳಂಬವಾಗುವ ಮುನ್ನವೇ ಈ ತಪ್ಪನ್ನು ತಿದ್ದಿಕೊಳ್ಳಿ ’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News