ಪದವಿ, ಸ್ನಾತಕೋತ್ತರ ಅಂತಿಮ ಸೆಮಿಸ್ಟರ್ ಗೆ ಪ್ರಥಮ ಬಾರಿಗೆ ಆನ್‌ಲೈನ್ ಪರೀಕ್ಷೆಗೆ ಸಿದ್ಧತೆ

Update: 2021-08-23 06:27 GMT
-ಪ್ರೊ.ಪಿ.ಎಸ್.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ

ಮಂಗಳೂರು, ಆ.23: ಕೋವಿಡ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಳ್ಳುವುದು ವಿಳಂಬವಾಗಿರುವಂತೆಯೇ, ಪದವಿ ಹಾಗೂ ಸ್ನಾತಕೋತ್ತರದ ಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಬಹುತೇಕವಾಗಿ ಸೆಪ್ಟಂಬರ್ ಅಂತ್ಯಕ್ಕೆ ಆನ್‌ಲೈನ್ ಮೂಲಕ ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯ ಮುಂದಾಗಿದೆ. ಈ ಕುರಿತಂತೆ ಸೆಪ್ಟಂಬರ್ ಪ್ರಥಮ ವಾರದಲ್ಲಿ ಅಂತಿಮ ನಿರ್ಧಾರವನ್ನು ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸುವ ಸಾಧ್ಯತೆ ಇದೆ.

ಪದವಿ ತರಗತಿಗಳ 1, 3, 5 ಸೆಮಿಸ್ಟರ್ ಪರೀಕ್ಷೆಗಳು ಮುಗಿಯುತ್ತಾ ಬರುತ್ತಿದೆ. ವೌಲ್ಯಮಾಪನ ಕೂಡಾ ಅಂತಿಮ ಹಂತದಲ್ಲಿದೆ. ಅದಾದ ಕೂಡಲೇ 2, 4 ಸೆಮಿಸ್ಟರ್‌ಗೆ ಫಾರ್ಮುಲ ಆಧರಿತ ಪ್ರಮೋಶನ್ (ಆಂತರಿಕ ಅಂಕಗಳನ್ನು 50ಕ್ಕೆ ಏರಿಕೆ ಹಾಗೂ ಈಗಾಗಲೇ ಪರೀಕ್ಷೆಯ ಅಂಕಗಳನ್ನು 50ಕ್ಕೆ ಇಳಿಕೆ ಮಾಡಿ ಒಟ್ಟು ಮಾಡಿ ಅಂಕ ಪಟ್ಟಿ ನೀಡುವಂತದ್ದು. ವಿವಿಯಿಂದ ಈ ಹಿಂದೆಯೂ ಈ ರೀತಿಯ ಪ್ರಯೋಗ ಮಾಡಲಾಗಿದೆ) ಮಾಡುವ ಜೊತೆಗೆ ಪದವಿ ಹಾಗೂ ಸ್ನಾತಕೋತ್ತರದ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್‌ಲೈನ್‌ಗೆ ವಿವಿ ಬಹುತೇಕವಾಗಿ ನಿರ್ಧರಿಸಿದೆ. ಇದಕ್ಕಾಗಿ ಆಗಸ್ಟ್ ಅಂತ್ಯಕ್ಕೆ ಟೆಂಡರ್ ಕರೆಯುವ ಯೋಜನೆಯನ್ನು ವಿವಿ ಕೈಗೆತ್ತಿಕೊಂಡಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಆನ್‌ಲೈನ್ ಪರೀಕ್ಷೆ ನಡೆಸಿ, ಶೀಘ್ರವೇ ಫಲಿತಾಂಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಆತಂಕವನ್ನು ದೂರಪಡಿಸಲು ಮಂಗಳೂರು ವಿವಿ ಮುಂದಾಗಿದೆ. ಇದಕ್ಕಾಗಿ ಪುಣೆ ಹಾಗೂ ಬೆಂಗಳೂರಿನಲ್ಲೂ ಇಂತಹ ಮಾದರಿಯನ್ನು ಕೈಗೊಂಡಿದ್ದಾರೆ.

ಆ ಬಗ್ಗೆ ಅಧ್ಯಯನ ನಡೆಸಿ ಆನ್‌ಲೈನ್ ಪರೀಕ್ಷೆ ನಡೆಸುವ ಸಿದ್ಧತೆಯನ್ನು ವಿವಿ ಆರಂಭಿಸಿದೆ. ಈಗಾಗಲೇ ಎರಡನೇ ಅಲೆ ಇನ್ನೇನು ಮುಗಿಯುತ್ತಿದೆ ಅನ್ನುತ್ತಿರು ವಾಗಲೇ 3ನೇ ಅಲೆಯ ಆತಂಕವೂ ಕಾಡುತ್ತಿದೆ. ಇದರಿಂದ ಈಗಾಗಲೇ ಅಂತಿಮ ಪದವಿ ತರಗತಿಗಳಲ್ಲಿರುವವರು ಉದ್ಯೋಗದ ಆಕಾಂಕ್ಷೆ ಅಥವಾ ಮುಂದಿನ ವಿದ್ಯಾಭ್ಯಾಸಕ್ಕೆ ಮುಂದಾಗುವ ನಿರೀಕ್ಷೆಯಲ್ಲಿರುವಾಗ ಪರೀಕ್ಷೆಗಳು ಇನ್ನೂ ವಿಳಂಬವಾಗದಂತೆ ಹಾಗೂ ಯುಜಿಸಿಯಿಂದಲೂ ಈಗಾಗಲೇ ಸೆಪ್ಟಂಬರ್ ಅಂತ್ಯದೊಳಗೆ ಪರೀಕ್ಷೆ ಮುಗಿಸುವ ಸೂಚನೆಯ ಹಿನ್ನೆಲೆಯಲ್ಲಿ ಆನ್‌ಲೈನ್ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಆನ್‌ಲೈನ್ ಪರೀಕ್ಷೆಗಾಗಿ ಸಾಫ್ಟ್‌ವೇರ್‌ಗೆ ಟೆಂಡರ್: ಆನ್‌ಲೈನ್ ಪರೀಕ್ಷೆ ಗಾಗಿ ವಿಶಿಷ್ಟವಾದ ಪ್ರಾಕ್ರೋರ್ಡ್ ಸ್‌ಟಾವೇರ್ ಬಳಕೆ ಮಾಡಿಕೊಂಡು ಪುಣೆಯ ವಿವಿ ಇಂತಹ ಪರೀಕ್ಷೆಗಳನ್ನು ನಡೆಸಿದೆ. ಇದರಲ್ಲಿ ವಿದ್ಯಾರ್ಥಿಗಳು ನಕಲು ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಪುಣೆ ವಿವಿಗೂ ಭೇಟಿ ನೀಡಲಾ ಗುತ್ತಿದೆ. ಅಲ್ಲಿಯ ಪರೀಕ್ಷಾ ಮಾದರಿಯನ್ನು ಅಧ್ಯಯನ ನಡೆಸಿಕೊಂಡು ಇಲ್ಲಿ ಅದನ್ನು ಅಳವಡಿಸಲು ಕ್ರಮ ವಹಿಸಲಾಗುವುದು. ಆನ್‌ಲೈನ್ ಮೂಲಕ ಬಹು ಆಯ್ಕೆಯ (ಈ ಬಾರಿ 10ನೇ ತರಗತಿ ಪರೀಕ್ಷೆ ನಡೆದ ಮಾದರಿಯಲ್ಲಿ) ಪರೀಕ್ಷೆ ಇದಾಗಿರುತ್ತದೆ. ಪ್ರಾಕ್ರೋರ್ಡ್ ಸಾಫ್ಟ್‌ವೇರ್ ಮೂಲಕ ಪರೀಕ್ಷೆ ನಡೆಸಲು ಟೆಂಡರ್ ಕರೆಯಲು ಮುಂದಾಗಿದ್ದೇವೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ.ಯಡಪಡಿತ್ತಾಯ ಅಭಿಪ್ರಾಯಿಸಿದ್ದಾರೆ.

ಭೌತಿಕ ತರಗತಿ ಆರಂಭ ವಿಳಂಬ ಸಾಧ್ಯತೆ: ಈಗಾಗಲೇ ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ಪದವಿ, ಸ್ನಾತಕೋತ್ತರ ತರಗತಿ ಗಳನ್ನು ಭೌತಿಕವಾಗಿ ನಡೆಸಲು ಸೂಚನೆ ನೀಡಿದೆ. ಆದರೆ ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಸ್ವಲ್ಪ ಹೆಚ್ಚಿರುವ ಕಾರಣ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ವಿಳಂಬವಾಗುವ ಸಾಧ್ಯತೆ ಇದೆ. ಈಗಾಗಲೇ ಪರೀಕ್ಷೆಗಳು ಕೂಡಾ ಆಗಬೇಕಾಗಿರುವುದರಿಂದ ಬಳಿಕವೇ ಕಾಲೇಜುಗಳಲ್ಲಿ ಭೌತಿಕ ತರಗತಿ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಆನ್‌ಲೈನ್ ವ್ಯವಸ್ಥೆಯಲ್ಲಿ ತರಗತಿಗಳು ಮುಂದುವರಿಸುವ ಹಾಗೂ ಮುಂದಿನ ಪರೀಕ್ಷೆಗಳನ್ನು ಕೂಡ ಆನ್‌ಲೈನ್ ಮಾದರಿಯಲ್ಲಿಯೇ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ.


ಪದವಿಯ 6ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ಪರೀಕ್ಷೆ ನಡೆಯಬೇಕಿದೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಗಳು ಕೂಡಾ ಆನ್‌ಲೈನ್‌ನಲ್ಲೇ ನಡೆದಿವೆ. ವಿದ್ಯಾರ್ಥಿಗಳು ಕೂಡಾ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿಯೇ ಮಾಡುವಂತೆ ಬೇಡಿಕೆ ಇರಿಸಿದ್ದಾರೆ. ಹಾಗಾಗಿ ಪ್ರಥಮ ಬಾರಿಗೆ ಆನ್‌ಲೈನ್ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪರೀಕ್ಷೆ ನಡೆಸಲು ಚರ್ಚೆ ನಡೆದಿದೆ. ಸೆಪ್ಟಂಬರ್ ಪ್ರಥಮ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. 
-ಪ್ರೊ.ಪಿ.ಎಸ್.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News