ಮಾನವೀಯ ಭಾರತ ಬೇಕು

Update: 2021-08-23 18:03 GMT

ಮಾನ್ಯರೇ,
ಈಗ ಸೈನಿಕರು, ಪೊಲೀಸರು, ಕ್ರೀಡಾಪಟುಗಳ ಅತಿವೈಭವೀಕರಣ ನಡೆಯುತ್ತಿದೆ. ಮನೋ ದೈಹಿಕ ಆರೋಗ್ಯಕ್ಕೆ ಕ್ರೀಡೆ, ಯೋಗ ಪೂರಕವೆನ್ನುವುದನ್ನು ಮರೆಯುವಂತಿಲ್ಲ. ಸಾಮಾನ್ಯ ಕುಟುಂಬದ ಹುಡುಗ-ಹುಡುಗಿಯರು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದು ತಂದಿರುವುದು ಮಹತ್ಸಾಧನೆಯೇ ಸರಿ. ಅವರಿಗೆ ವಿಶೇಷ ಸನ್ಮಾನಗಳು, ಉನ್ನತ ಉದ್ಯೋಗಗಳು, ಪ್ರಶಸ್ತಿ ಸಲ್ಲಬೇಕಾದ್ದೇ. ಅವರ ಊರಿಗೆ, ಬಡಾವಣೆಗೆ, ಪ್ರಮುಖ ಕ್ರೀಡಾ ಕೇಂದ್ರಗಳಿಗೆ ಪದಕ ವಿಜೇತರ ಹೆಸರುಗಳನ್ನು ಇಡಬಹುದು. ಆದರೆ ಕೊಟಿ ಕೋಟಿ ನಗದು ಬಹುಮಾನಗಳು ಸೂಕ್ತವೇ?

ಭಾರತದ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಗ್ರಾಮಗಳಲ್ಲಿನ್ನೂ ರಸ್ತೆ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮರೀಚಿಕೆಯಾಗಿದೆ. ಕೊರೋನ, ಕ್ಷಯ, ಮಲೇರಿಯಾಗಳಿಂದ ಸಾವಿರಾರು ಜನ ಸಾಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಯುವಕರೂ, ಉತ್ಸಾಹಿಗಳೂ ಆದ ಕ್ರೀಡಾಪಟುಗಳು ಆಜೀವ ಪರ್ಯಂತ ಕುಳಿತು ತಿನ್ನುವಷ್ಟು ಹಣ ಕೊಡಬೇಕೇ? ಅವರು ಈ ಹಣಕ್ಕೋಸ್ಕರವೇ ಆಟವಾಡಿದರು ಎಂಬ ಭಾವನೆ ಜನರಲ್ಲಿ ಮೂಡುವುದಿಲ್ಲವೇ?

ಇಂದು ಸರಿಯಾದ ಆಹಾರ, ಚಿಕಿತ್ಸೆ, ಸ್ವಚ್ಛವಾದ ಪರಿಸರಗಳಿಲ್ಲ್ಲದೆ ರೋಗ, ಸಾವುಗಳಿಗೆ ತುತ್ತಾಗಿರುವ ಮಕ್ಕಳಲ್ಲಿ ಅದೆಷ್ಟು ಮಂದಿ ಭವಿಷ್ಯದ ಸಚಿನ್, ಸಾನಿಯಾ, ಸಿಂಧೂ, ನೀರಜ್‌ಗಳಿದ್ದರೋ ಬಲ್ಲವರು ಯಾರು? ವಿಷಾದದ ಸಂಗತಿ ಎಂದರೆ ಬಹುತೇಕ ಕ್ರೀಡಾಕಲಿಗಳು ದಂತಗೋಪುರ ವಾಸಿಗಳಾಗಿದ್ದು, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದವರಲ್ಲ. ಕೋವಿಡ್ ಅಬ್ಬರದ ದುರ್ಭರ ಸಮಯದಲ್ಲಿ ಇಂತಹವರ ಕೊಡುಗೆ, ನೆರವು ಎಷ್ಟಿತ್ತು?.

ದೇಶಭಕ್ತಿ ಎಂದರೆ ಪದಕ ಗೆದ್ದು ಅದಕ್ಕೆ ಮುತ್ತಿಡುವುದು, ಪಾಕ್ ವಿರುದ್ಧ ರಣಘೋಷ ಮಾಡುವುದು, ಮಂದಿರ ನಿರ್ಮಾಣಕ್ಕೆ ಸುರಿಯುವುದು, ಪುಣ್ಯಕ್ಷೇತ್ರಗಳಿಗೆ ಭೇಟಿ ಇಷ್ಟೇ ಎನ್ನುವುದಾದರೆ ‘ಮಾನವೀಯ ಭಾರತ’ ಕಣ್ಮರೆಯಾಗಿ ಜಿಮ್ ಭಾರತ, ಯಜ್ಞ ಭಾರತ, ಯುದ್ಧ ಭಾರತ ಅಸ್ತಿತ್ವಕ್ಕೆ ಬರುತ್ತದೆ. ನಮ್ಮ ಕ್ರೀಡಾಪಟುಗಳು ದಮನಿತರು, ನಿರ್ಗತಿಕರತ್ತ ದೃಷ್ಟಿ ಹರಿಸಲಿ. ಸೋನುಸೂದ್, ಸುದೀಪ್‌ರ ಮಾದರಿಯನ್ನು ಕಂಡು ಕಲಿಯಲಿ.

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News