ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ ಸಾಧ್ಯತೆ; ಬಿಜೆಪಿ-ಶಿವಸೇನೆ ಕಾರ್ಯಕರ್ತರ ಘರ್ಷಣೆ

Update: 2021-08-24 07:39 GMT

ಮುಂಬೈ: ಭಾರತದ ಸ್ವಾತಂತ್ರ್ಯದ ವರ್ಷವನ್ನು ಮರೆತಿರುವ  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಮೋಕ್ಷ  ಮಾಡುವೆ ಎಂದು  ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ  ಅವರ ವಿರುದ್ದ ಮಹಾರಾಷ್ಟ್ರದ ವಿವಿಧೆಡೆ  ಶಿವಸೇನೆ ಕಾರ್ಯಕರ್ತರು ದೂರು ದಾಖಲಿಸಿದ  ನಂತರ ನಾರಾಯಣ್ ರಾಣೆ ಬಂಧನ ವಾರಂಟ್ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಹಾಗೂ  ಪ್ರತಿಪಕ್ಷ ಬಿಜೆಪಿ ಕಾರ್ಯಕರ್ತರು ಇಂದು ಮುಂಬೈನಲ್ಲಿ ಘರ್ಷಣೆ ನಡೆಸಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಉತ್ತರ ಮಹಾರಾಷ್ಟ್ರ ನಗರದಲ್ಲಿ ಎಫ್ಐಆರ್ ದಾಖಲಾದ ನಂತರ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ತಕ್ಷಣವೇ ಬಂಧಿಸುವಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಮಂಗಳವಾರ ಆದೇಶ ಹೊರಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ನಾಸಿಕ್ ಪೊಲೀಸರ ತಂಡವು ಬೆಳಿಗ್ಗೆ ರತ್ನಗಿರಿ ಜಿಲ್ಲೆಗೆ ಹೊರಟಿತು. ಅಲ್ಲಿ ರಾಣೆ ಅವರು ತಮ್ಮ 'ಜನ್ ಆಶೀರ್ವಾದ ಯಾತ್ರೆ' ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎಂ ವಿರುದ್ಧ  ಟೀಕೆ ನಂತರ, ರಾಣೆ ವಿರುದ್ಧ ನಾಸಿಕ್ ನಗರ ಶಿವಸೇನೆ ಘಟಕದ ಮುಖ್ಯಸ್ಥರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಣೆ ಅವರ ಹೇಳಿಕೆಗಳು ಠಾಕ್ರೆಯವರ ಶಿವಸೇನೆಯ ಸದಸ್ಯರಿಂದ ಪ್ರತಿಭಟನೆಗೆ ಕಾರಣವಾಗಿದೆ. ಸೋಮವಾರ ಬೆಳಗ್ಗೆ ನಾಗ್ಪುರದ ಬಿಜೆಪಿ ಕಚೇರಿಯ ಮೇಲೆ ಶಿವಸೇನೆಯ ಕಾರ್ಯಕರ್ತರ ಗುಂಪು ಕಲ್ಲುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ.

ಪಕ್ಷದ ಮಾಜಿ ನಾಯಕರಾದ ರಾಣೆ ಅವರು ರಾಜ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ನೋಡುತ್ತಿದ್ದಾರೆ ಹಾಗೂ  ಅವರ ಹೇಳಿಕೆಗಳು ಉದ್ವಿಗ್ನತೆ ಸೃಷ್ಟಿಮಾಡುವ ಅವರ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಶಿವಸೇನೆ ಹೇಳಿದೆ.

ಉದ್ದವ್  ಠಾಕ್ರೆ ತಮ್ಮ ಆಗಸ್ಟ್ 15 ರ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯದ ವರ್ಷವನ್ನು ಮರೆತಿದ್ದಾರೆ. ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು . ಆ ಸಮಯದಲ್ಲಿ ನಾನು ಅಲ್ಲಿರುತ್ತಿದ್ದರೆ ಠಾಕ್ರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಸೋಮವಾರ  ಜನಾಶೀರ್ವಾದ ಯಾತ್ರೆಯಲ್ಲಿ ರಾಣೆ ಹೇಳಿದ್ದರು.

ಶಿವಸೇನೆಯ ಯುವ ಘಟಕ ಯುವ ಸೇನೆ, ನಾರಾಯಣ ರಾಣೆ  “ಕೋಂಬ್ಡಿ ಚೋರ್(ಕೋಳಿ ಕಳ್ಳ)’ಎಂದು  ಮೂದಲಿಸುವ ಪೋಸ್ಟರ್‌ಗಳನ್ನುವಿವಿಧೆಡೆ  ಅಂಟಿಸಿದೆ.  ಐದು ದಶಕಗಳ ಹಿಂದೆ ರಾಣೆ ಅವರು ಚೆಂಬೂರಿನಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿದ್ದನ್ನು ಉಲ್ಲೇಖಿಸಿ ಈ ಟೀಕೆ ಮಾಡಲಾಗಿದೆ. ಆಗ ಅವರು ಶಿವಸೇನೆಯಲ್ಲಿದ್ದರು.

ಶಿವಸೇನೆ ಸಂಸದ ವಿನಾಯಕ್ ರಾವುತ್ ಅವರು ರಾಣೆ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

"ಬಿಜೆಪಿ ನಾಯಕತ್ವವನ್ನು ಮೆಚ್ಚಿಸಲು ಶಿವಸೇನೆ ಮತ್ತು ಅದರ ನಾಯಕರ ಮೇಲೆ ರಾಣೆ ವಾಗ್ದಾಳಿ ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಸಚಿವಾಲಯಕ್ಕೆ ಸೇರ್ಪಡೆಗೊಂಡ ನಂತರ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಮೋದಿ ಅವರು ರಾಣೆಗೆ ನಿರ್ಗಮನ ಬಾಗಿಲು ತೋರಿಸಬೇಕು" ಎಂದು  ರಾವತ್ ಹೇಳಿದರು.

ಬಾಳಾ ಠಾಕ್ರೆ ನೇತೃತ್ವದ ಶಿವಸೇನೆಯೊಂದಿಗೆ ಮುಂಬೈನಲ್ಲಿ ರಾಣೆ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. ಅವರು 1990 ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಸೇನಾ ಶಾಸಕರಾಗಿ ಪ್ರವೇಶಿಸಿದ್ದರು. ರಾಣೆ ಅವರು 1999 ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಣೆ  2005 ರಲ್ಲಿ ಠಾಕ್ರೆಯವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಶಿವಸೇನೆಯನ್ನು ತೊರೆದರು.

ಅವರು ಕಾಂಗ್ರೆಸ್ ಸೇರಿ ರಾಜ್ಯ ಸಚಿವರಾದರು. ಆದರೆ 2017 ರಲ್ಲಿ ಅವರು ಕಾಂಗ್ರೆಸ್ ಅನ್ನು ತೊರೆದರು. ಪಕ್ಷವು ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಭರವಸೆಯನ್ನು ಈಡೇರಿಸಲಿಲ್ಲ ಎಂದು ಆರೋಪಿಸಿದರು. ಅವರು ತಮ್ಮ ಇಬ್ಬರು ಪುತ್ರರಾದ ನಿಲೇಶ್ ಮತ್ತು ನಿತೇಶ್ ಅವರೊಂದಿಗೆ ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. ಆದರೆ ನಂತರ ಅದನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದರು.

ಅವರು ಜುಲೈನಲ್ಲಿ ಪ್ರಧಾನಿ ಮೋದಿ ಸಂಪುಟಕ್ಕೆ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News