×
Ad

ಹಿಂದುತ್ವ ಕಾರ್ಯಕರ್ತರಿಂದ ಥಳಿತಕ್ಕೊಳಗಾದ ಬಳೆ ಮಾರಾಟಗಾರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Update: 2021-08-24 17:20 IST
Photo: video screengrab

ಇಂದೋರ್: ಹಿಂದು ಹೆಸರನ್ನು ಬಳಸಿಕೊಂಡಿದ್ದ ಬಳೆ ಮಾರಾಟಗಾರನೊಬ್ಬನಿಗೆ  ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಥಳಿಸಿ ಲೂಟಿಗೈದ ಪ್ರಕರಣದ ನಂತರದ ಬೆಳವಣಿಗೆಯಲ್ಲಿ ಆತ 13 ವರ್ಷದ ಬಾಲಕಿಯ ಜತೆ ಅನುಚಿತವಾಗಿ ವರ್ತಿಸಿದ್ದಾನೆಂಬ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಬಳೆ ಮಾರಾಟಗಾರ ತಸ್ಲೀಂ ಆಲಿ ಎಂಬಾತನ ದೂರಿನ ಆಧಾರದಲ್ಲಿ ಪೊಲೀಸರು  ಆತನಿಗೆ ಥಳಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ. ಅದರೆ ಅದೇ ದಿನ ಆರೋಪಿಯೊಬ್ಬನ ಅಪ್ರಾಪ್ತೆ ಪುತ್ರಿಯ ದೂರಿನ ಆಧಾರದಲ್ಲಿ ಆಲಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕಳೆದ ಭಾನುವಾರ ಆಲಿ ಆ ಬಾಲಕಿಯ ಮನೆಗೆ ತನ್ನನ್ನು ಗೋಲು ಎಂದು ಪರಿಚಯಿಸಿಕೊಂಡು ಬಳೆ ಮಾರಾಟ ಮಾಡಿಕೊಂಡು ಬಂದಿದ್ದನಲ್ಲದೆ ಅರ್ಧ ಸುಟ್ಟು ಹೋಗಿದ್ದ ಆಧಾರ್ ಕಾರ್ಡ್ ಕೂಡ ತೋರಿಸಿದ್ದ.

"ನಾವು ಆತನಿಂದ ಬಳೆಗಳನ್ನು ಖರೀದಿಸಿದ್ದೆವು. ತಾಯಿ ಹಣ ತರಲೆಂದು ಮನೆಯ ಒಳಗೆ ಹೋದಾಗ ಆತ ನನ್ನ ಜತೆ ಅನುಚಿತವಾಗಿ ವರ್ತಿಸಿದ ಹಾಗೂ ನನ್ನ ಕೈಗಳನ್ನು ಹಿಡಿದೆಳೆದು ಬಳೆ ತೊಡಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದ. ನನ್ನ ಗಲ್ಲವನ್ನೂ ಅನುಚಿತವಾಗಿ ಮುಟ್ಟಿದ್ದಾನೆ" ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳಲ್ಲದೆ ತಾನು ಬೊಬ್ಬಿಟ್ಟಾಗ ಸಾಯಿಸುವ ಬೆದರಿಕೆಯೊಡ್ಡಿ ಆತ ಓಡಿದ್ದನೆಂದು ಆರೋಪಿಸಿದ್ದಾಳೆ. ನಂತರ  ಆತನನ್ನು ಸ್ಥಳೀಯರು ಬೆಂಬತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ.

 ಬಳೆ ಮಾರಾಟಗಾರನ ಬಳಿ ಎರಡು ಆಧಾರ್ ಕಾರ್ಡ್‍ಗಳಿದ್ದವು, ಒಂದರಲ್ಲಿ ಆತನ ಹೆಸರು ಅಸ್ಲೀಂ, ಮೋರ್ ಸಿಂಗ್ ಪುತ್ರ ಎಂದಿದ್ದರೆ ಇನ್ನೊಂದರಲ್ಲಿ ತಸ್ಲೀಂ, ಮೊಹರ್ ಸಿಂಗ್ ಪುತ್ರ  ಎಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ವೀಡಿಯೋ ಕೂಡ ಹರಿದಾಡಿದ್ದು, ಹಿಂದುಗಳಿರುವ ಪ್ರದೇಶದತ್ತ ಸುಳಿಯದಂತೆ  ಆತನಿಗೆ ಕೆಲವರು ಬೆದರಿಸುತ್ತಿರುವುದು ಹಾಗೂ ಆತನ ಬಳೆ ಚೀಲವನ್ನು ಖಾಲಿಗೊಳಿಸಿ ಆತನಿಗೆ ಥಳಿಸುತ್ತಿರುವುದು ಅದರಲ್ಲಿ ಕಾಣಿಸುತ್ತದೆ.

ತನ್ನ ಮೊಬೈಲ್ ಫೋನ್ ಹಾಗೂ ರೂ 10,000 ನಗದು ಹಾಗೂ ರೂ 25,000 ಬೆಲೆಯ ಬಳೆಗಳು ಹಾಗೂ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಆರೋಪಿಗಳು ಸೆಳೆದುಕೊಂಡಿದ್ದಾರೆಂದು ಬಳೆ ಮಾರಾಟಗಾರ ತನ್ನ ದೂರಿನಲ್ಲಿ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News