ವಾಲ್ಮೀಕಿಯನ್ನು ತಾಲಿಬಾನ್‌ ಗೆ ಹೋಲಿಸಿದ್ದಾರೆಂದು ಉರ್ದು ಕವಿ ಮುನವ್ವರ್‌ ವಿರುದ್ಧ ಎಫ್‌ಐಆರ್‌ ದಾಖಲು

Update: 2021-08-24 13:09 GMT
Photo: Faceook/Munawwar Rana

ಭೋಪಾಲ್: ಉರ್ದು ಕವಿ ಮುನವ್ವರ್ ರಾಣಾ ಅವರು ವಾಲ್ಮೀಕಿ ಮುನಿಯನ್ನು ಉಗ್ರ ಗುಂಪು ತಾಲಿಬಾನ್‍ಗೆ ಹೋಲಿಸಿದ್ದಾರೆಂದು ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶ ಬಿಜೆಪಿ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ಸುನಿಲ್ ಮಾಲವಿಯ ನೀಡಿದ ದೂರಿನ ಆಧಾರದಲ್ಲಿ ಮುನವ್ವರ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಟಿವಿ ಕಾರ್ಯಕ್ರಮವೊಂದರ ವೇಳೆ ಮುನವ್ವರ್ ನೀಡಿದ ಹೇಳಿಕೆ ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಿಂದಿ ಟಿವಿ ಶೋ ಒಂದರ ಆ್ಯಂಕರ್ ಮುನವ್ವರ್ ಜತೆ ಮಾತನಾಡುತ್ತಾ,. ಈಗ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನಿಗಳನ್ನು ಉಗ್ರರೆಂದು ಪರಿಗಣಿಸುತ್ತೀರಾ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುನವ್ವರ್, "ಇಲ್ಲಿಯ ತನಕ ಅವರು ಉಗ್ರವಾದಿಗಳು. ಆದರೆ ವಾಲ್ಮೀಕಿ ಅವರು ರಾಮಾಯಣ ಬರೆದ ನಂತರ ದೇವತೆಯಾದರು. ಅದಕ್ಕಿಂತ ಮುನ್ನ ಅವರೊಬ್ಬ ಡಕಾಯಿತರಾಗಿದ್ದರು. ಒಬ್ಬನ ವ್ಯಕ್ತಿತ್ವ ಬದಲಾಗುತ್ತಿರುತ್ತದೆ" ಎಂದಿರುವುದು ವೀಡಿಯೋವೊಂದರಲ್ಲಿ ಕೇಳಿಸುತ್ತದೆ.

ಮುಂದೆ ಮಾತನಾಡಿದ ಮುನವ್ವರ್ "ನೀವು ವಾಲ್ಮೀಕಿಯನ್ನು ದೇವರೆಂದು ಹೇಳಬಹುದು, ಆದರೆ ಅವರೊಬ್ಬ ಸಾಹಿತಿ. ಅವರ ಹಿನ್ನೆಲೆಯನ್ನು ಕೆದಕಬೇಕು. ಅವರು ರಾಮಾಯಣ ಬರೆದರು. ಆದೊಂದು ದೊಡ್ಡ ಕೆಲಸ, ನಾನಿಲ್ಲಿ ಹೋಲಿಕೆಯ ಬಗ್ಗೆ ಮಾತನಾಡುತ್ತಿಲ್ಲ" ಎಂದಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುನವ್ವರ್ ವಿರುದ್ಧ ಲಕ್ನೋದಲ್ಲೂ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News