×
Ad

"ನಾನು ಬಿಜೆಪಿಯನ್ನು ನಂಬಿದ್ದೆ, ಆದರೆ ನನ್ನನ್ನೇ ಜೈಲಿಗೆ ತಳ್ಳಲಾಯಿತು"

Update: 2021-08-24 18:52 IST
Photo: Thewire.in

ಹೊಸದಿಲ್ಲಿ,ಆ.22: ಈಶಾನ್ಯ ದಿಲ್ಲಿಯಲ್ಲಿ 2020,ಫೆಬ್ರವರಿಯಲ್ಲಿ ಸಂಭವಿಸಿದ್ದ ಕೋಮುದಂಗೆಗಳಿಗೆ ಸಂಬಂಧಿಸಿದಂತೆ ಕೊಲೆ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಬಿಜೆಪಿ ಕಾರ್ಯಕರ್ತ ರಯೀಸ್ ಅಹ್ಮದ್ (50) ಕಳೆದ ತಿಂಗಳು ಮಂಡೋಲಿ ಜೈಲಿನಿಂದ ಜಾಮೀನಿನಲ್ಲಿ ಹೊರಬಂದಿದ್ದಾರೆ. ವರ್ಷಗಳ ಕಾಲ ತನ್ನ ಬಡಾವಣೆಯಲ್ಲಿ ಕೋಮು ಸಾಮರಸ್ಯವನ್ನು ಬಲಗೊಳಿಸಲು ಶ್ರಮಿಸಿದ್ದ ಅಹ್ಮದ್ ಈಗ ತನಗೆ ಯಾರನ್ನು ನಂಬಬೇಕು ಎನ್ನುವುದೇ ತೋಚುತ್ತಿಲ್ಲ ಎನ್ನುತ್ತಿದ್ದಾರೆ. 

‘ನಾನು ಬಿಜೆಪಿಯಲ್ಲಿ ನಂಬಿಕೆಯನ್ನಿಟ್ಟಿದ್ದೆ ಮತ್ತು ನಾನು ಮಾಡದ ಅಪರಾಧದ ಆರೋಪದಲ್ಲಿ ನನ್ನನ್ನು ಜೈಲಿಗಟ್ಟಲಾಯಿತು ’ಎಂದು ಅಹ್ಮದ್ ಸುದ್ದಿಜಾಲತಾಣ The Wire ಬಳಿ ಅಳಲು ತೋಡಿಕೊಂಡರು.

ವೃತ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಡೆನಿಮ್ ಬಟ್ಟೆಗಳ ಪೂರೈಕೆದಾರನಾಗಿರುವ ಅಹ್ಮದ್ ಸದಾ ಸಮುದಾಯದ ಹಿತಕ್ಕಾಗಿ ಶ್ರಮಿಸಿದ ವ್ಯಕ್ತಿಯಾಗಿದ್ದು, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ಜನರ ಕೆಲಸಕಾರ್ಯಗಳಲ್ಲಿ ನೆರವಾಗುತ್ತಿದ್ದರು. ವರ್ಷಗಳಿಂದಲೂ ಅವರ ಸಾಮಾಜಿಕ-ರಾಜಕೀಯ ವ್ಯಕ್ತಿತ್ವವು ಜನಪ್ರಿಯವಾಗಿತ್ತು ಮತ್ತು ಸ್ಥಳೀಯ ಪೊಲೀಸರು,ಸ್ಥಳೀಯ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರ ಗೌರವಕ್ಕೆ ಪಾತ್ರರಾಗಿದ್ದರು. 2014ರಲ್ಲಿ ಬಿಜೆಪಿಯನ್ನು ಸೇರಿದ್ದ ಅಹ್ಮದ್ ಪಕ್ಷಕ್ಕಾಗಿ ತನ್ನ ಅಹರ್ನಿಶಿ ದುಡಿಮೆಗಾಗಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ.

ತಾನು ಮಾಡದ ಅಪರಾಧಕ್ಕಾಗಿ ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಲ್ಪಟ್ಟು ಜೈಲು ಸೇರಿದ್ದ ಅಹ್ಮದ್,ಜೈಲುವಾಸವು ಜನರು ನಿಜಕ್ಕೂ ಏನು ಎಂದು ಗುರುತಿಸುವಷ್ಟು ವಿವೇಚನೆಯನ್ನು ತನಗೆ ನೀಡಿದೆ ಎಂದರು.
  
ಒಂದು ವರ್ಷದ ಹಿಂದೆ ಅಹ್ಮದ್ ಸೀಲಮ್ಪುರ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಚೌಹಾಣ ಬಂಗೇರ್ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2020,ಫೆ.24ರಂದು ಈಶಾನ್ಯ ದಿಲ್ಲಿಯಲ್ಲಿ ಮುಸ್ಲಿಂ ವಿರೋಧಿ ದಂಗೆಗಳು ಆರಂಭವಾದಾಗ ಹಿಂಸಾಚಾರದ ಚಟುವಟಿಕೆಗಳನ್ನು ತಡೆಯಲು ತಾನು ವಾಸವಿರುವ ಅಖಾಡೆವಾಲಿ ಗಲ್ಲಿಯ ಪ್ರವೇಶ ದ್ವಾರದಲ್ಲಿ ಕಾವಲು ನಿಂತಿದ್ದರು. ಪರಿಸ್ಥಿತಿ ಕೈಮೀರಿದಾಗ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿದ್ದರು ಮತ್ತು ಶೀಘ್ರವೇ ನೆರವು ಒದಗಿಸಲಾಗುವುದು ಎಂಬ ಎಸ್ಎಂಎಸ್ ಅವರ ಮೊಬೈಲಿಗೆ ಬಂದಿತ್ತು. "ಅದೊಂದು ಭಯಂಕರ ದೃಶ್ಯವಾಗಿತ್ತು. ಖಡ್ಗಗಳು ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡಿದ್ದ ಅಸಂಖ್ಯಾತ ಮುಸುಕುಧಾರಿ ಜನರು ‘ಹರ ಹರ ಮಹಾದೇವ’ ಘೋಷಣೆಗಳನ್ನು ಕೂಗುತ್ತಿದ್ದರು’ ಎಂದು ಅಹ್ಮದ್ ನೆನಪಿಸಿಕೊಂಡರು.

ಹಿಂಸಾಚಾರಗಳು ಅಂತ್ಯಗೊಂಡಾಗ ಹಲವಾರು ಜನರು ಕೊಲ್ಲಲ್ಪಟ್ಟಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದ್ದಾಗಲೇ ಚುನಾವಣೆ ಸಮೀಪಿಸಿತ್ತು. ಉಸ್ಮಾನಾಬಾದ ಪೊಲೀಸ್ ಠಾಣಾಧಿಕಾರಿಯೊಂದಿಗೆ ಸಹಕರಿಸಿ, ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯುವಂತಾಗಲು ನೆರವಾಗುವಂತೆ ಅಧಿಕಾರಿಗಳು ಅಹ್ಮದ್ ರನ್ನು ಕೋರಿಕೊಂಡಿದ್ದರು. ಚುನಾವಣೆಗಳು ಮುಗಿದ ಬಳಿಕ ಠಾಣಾಧಿಕಾರಿ ಲೇಖಸಿಂಗ್ ಅವರು ಅಹ್ಮದ್ ರನ್ನು ಠಾಣೆಗೆ ಬರಮಾಡಿಕೊಂಡು ಚುನಾವಣೆಯಲ್ಲಿ ನೆರವಾಗಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದರು. 

ಅಮಾನ್ ಆ್ಯಕ್ಷನ್ ಕಮಿಟಿಯ ಸದಸ್ಯರಾಗಿದ್ದ ಅಹ್ಮದ್ ಅವರನ್ನು ದಂಗೆಗೂ ಮುನ್ನ ಸಿಎಎ/ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳುವುದು ಅಗತ್ಯವಾದಾಗಲೆಲ್ಲ ಜಫ್ರಾಬಾದ್ ಪೊಲೀಸರು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಮುಂದೊಂದು ದಿನ ತನ್ನನ್ನು ಬಂಧಿಸಿ ತನಗೆ ಹೆಚ್ಚಿನ ಗೌರವ ಸಲ್ಲುತ್ತಿದ್ದ ಅದೇ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ ಎಂದು ಅಹ್ಮದ್ ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.

ಕೋಮುದಂಗೆ ಆರಂಭಗೊಂಡ ದಿನ ಹಿಂಸೆಯನ್ನು ತಡೆಯಲು ತನ್ನ ಬೀದಿಯ ಪ್ರವೇಶದ್ವಾರದಲ್ಲಿ ನಿಂತಿದ್ದ ಅಹ್ಮದ್ ಹಿಂಸಾಚಾರಕ್ಕೆ ಮುಂದಾಗಿದ್ದ ಯುವಕನೋರ್ವನ ಕೈಯಲ್ಲಿದ್ದ ಬಡಿಗೆಯನ್ನು ಕಿತ್ತುಕೊಂಡಿದ್ದರು. ಅವರು ಬಡಿಗೆಯನ್ನು ಹಿಡಿದುಕೊಂಡು ನಿಂತಿದ್ದು ವೀಡಿಯೊದಲ್ಲಿ ದಾಖಲಾಗಿತ್ತು ಮತ್ತು ಇದೇ ಆಧಾರದಲ್ಲಿ ಅಹ್ಮದ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ ಪೊಲಿಸರು ಅವರನ್ನು ಮಂಡೋಲಿ ಜೈಲಿಗೆ ತಳ್ಳಿದ್ದರು. ತನ್ನನ್ನು ಇರಿಸಿದ್ದ ಜೈಲಿನ ಬ್ಯಾರಕ್ನಲ್ಲಿ ಹಿಂಸಾಚಾರದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಮುಸ್ಲಿಮರೇ ತುಂಬಿದ್ದರು ಎಂದು ಹೇಳಿದ ಅಹ್ಮದ್,‘19 ಮಸೀದಿಗಳನ್ನು ಸುಡಲಾಗಿತ್ತು,ಒಂದೇ ಒಂದು ದೇವಸ್ಥಾನಕ್ಕೆ ಬೆಂಕಿ ಬಿದ್ದಿರಲಿಲ್ಲ. ಇಷ್ಟಾದರೂ ಮುಸ್ಲಿಮರನ್ನೇ ದಂಗೆ ಆರೋಪಿಗಳನ್ನಾಗಿ ಮಾಡಲಾಗಿದೆ ’ ಎಂದು ಹತಾಶಧ್ವನಿಯಲ್ಲಿ ನುಡಿದರು.

ಅಹ್ಮದ್ ಜೈಲಿನಲ್ಲಿ ಕೊಳೆಯುತ್ತಿದ್ದರೆ ಇತ್ತ ಅವರ ಕುಟುಂಬ ಬದುಕುಳಿಯಲು ಭಾರೀ ಸಾಲವನ್ನು ಮಾಡಿಕೊಂಡಿದೆ. ಅಹ್ಮದ್ ರ ಜಾಮೀನಿಗಾಗಿ, ಕ್ಷಯರೋಗದಿಂದ ನರಳುತ್ತಿರುವ ಮಗಳು ಇಲ್ಮಾಳ ಚಿಕಿತ್ಸೆಗಾಗಿ ಈ ಸಾಲದ ಹಣ ಬಳಕೆಯಾಗಿತ್ತು. ವೆಚ್ಚಗಳನ್ನು ತಗ್ಗಿಸಲು ಅಹ್ಮದ್ ರ ಪತ್ನಿ ಮತ್ತು ಮೂವರು ಹದಿಹರೆಯದ ಮಕ್ಕಳು ಅರೆಹೊಟ್ಟೆಯಲ್ಲಿಯೇ ದಿನಗಳನ್ನು ದೂಡುತ್ತಿದ್ದರು.

‘ಯಾರೂ ನಮಗೆ ನೆರವಾಗಿರಲಿಲ್ಲ. ಇಷ್ಟೆಲ್ಲ ವರ್ಷ ನಾನು ಯಾರಿಗಾಗಿ ದುಡಿದಿದ್ದೆನೋ ಆ ಅಧಿಕಾರಿಗಳು ಮತ್ತು ರಾಜಕಾರಣಿಗಳು ನೆರವಿಗೆ ಬರಲಿಲ್ಲ. ಆಪ್ ನಾಯಕ ಅಮಾನತುಲ್ಲಾ ಖಾನ್ ನೀಡಿದ್ದ 25,000 ರೂ.ನಾವು ಸ್ವೀಕರಿಸಿದ್ದ ಏಕೈಕ ನೆರವು ಆಗಿತ್ತು. ನನ್ನ ಜಾಮೀನಿಗಾಗಿ ಒಂದು ಲಕ್ಷ ರೂ.ಒಟ್ಟುಗೂಡಿಸಲು ನನ್ನ ಕುಟುಂಬ ಬಂಧುಗಳ ಮುಂದೆ ಕೈಚಾಚುವಂತಾಗಿತ್ತು ’ಎಂದು ಅಹ್ಮದ್ ಹೇಳಿದರು.

ಮೊದಲು ಜನರು ಪರಸ್ಪರ ಗೆಳೆತನದಿಂದ ಇದ್ದರು, ಆದರೆ ಬಿಜೆಪಿ ಅವರಿಗೆ ಧರ್ಮದ ಹೆಸರಿನಲ್ಲಿ ದ್ವೇಷದ ಪಾಠವನ್ನು ಬೋಧಿಸಿದೆ ಎಂದು ದಂಗೆಗಳಿಗೆ ಮುನ್ನ ಪ್ರದೇಶದಲ್ಲಿ ಹಲವಾರು ಹಿಂದು ಸ್ನೇಹಿತೆಯರನ್ನು ಹೊಂದಿದ್ದ ಶಾಹಿನಾ ಹತಾಶರಾಗಿ ಹೇಳಿದರು.

‘2014ರಿಂದ ದೇಶದಲ್ಲಿ ಹಿಂದು ಪಾರಮ್ಯದ ತರ್ಕ ಮಾತ್ರ ಚಾಲ್ತಿಯಲ್ಲಿದೆ ಎನ್ನುವುದು ಕೊನೆಗೂ ನನಗೆ ಗೊತ್ತಾಗಿದೆ. ನಾವು ಟೋಪಿಗಳನ್ನು ಧರಿಸಿಕೊಂಡು,ಗಡ್ಡವನ್ನು ಬಿಟ್ಟುಕೊಂಡು ಮನೆಯಿಂದ ಹೊರಕ್ಕೆ ಹೋಗಲೂ ಹೆದರುವಂತಾಗಿದೆ. ಇದು ಸ್ವತಂತ್ರ ಭಾರತದ ಇಂದಿನ ಸ್ಥಿತಿ ’ಎಂದು ಅಹ್ಮದ್ ಹೇಳಿದರು.

‘ನನ್ನ ದೇಶವನ್ನು ಪ್ರೀತಿಸುವಂತೆ ಇಸ್ಲಾಂ ನನಗೆ ಬೋಧಿಸಿದೆ ಮತ್ತು ಈ ದೇಶವನ್ನು ಪ್ರಿತಿಸುವುದನ್ನು ನಾನು ಮುಂದುವರಿಸುತ್ತೇನೆ. ಆದರೆ ಯಾರನ್ನು ನಂಬಬೇಕು ಎನ್ನುವುದು ನನಗೆ ತೋಚುತ್ತಿಲ್ಲ. ಬಿಜೆಪಿಯನ್ನ ನಂಬಿದ್ದಕಾಗಿ ನನ್ನನ್ನು ಅವಹೇಳನ ಮಾಡಲಾಯಿತು,ಜೈಲಿಗೆ ತಳ್ಳಲಾಯಿತು ಮತ್ತು ನನಗೆ ವಿಶ್ವಾಸದ್ರೋಹವನ್ನು ಮಾಡಲಾಯಿತು ಎನ್ನುವುದು ಮಾತ್ರ ನನಗೆ ಗೊತ್ತು ’ಎಂದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News