ಸಹಜ ಸ್ಥಿತಿಯನ್ನು ಕಾಯ್ದುಕೊಳ್ಳಲು ಲಾಠಿ ಬಳಸಿದರೆ ತಪ್ಪಿಲ್ಲ: ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಸಿನ್ಹಾ

Update: 2021-08-24 13:58 GMT

ಹೊಸದಿಲ್ಲಿ,ಆ.23: ಜಮ್ಮು-ಕಾಶ್ಮೀರದಲ್ಲಿ ಬಂದ್ ಗಾಗಿ ಬಂದೂಕನ್ನು ನೆಚ್ಚಿಕೊಳ್ಳುವ ಪಾಕಿಸ್ತಾನದ ಚಾಳಿಯನ್ನು ಎದುರಿಸಲು ‘ದಂಡಾ(ಲಾಠಿ ಅಥವಾ ಬಡಿಗೆ)’ವನ್ನು ಬಳಸುವುದರಲ್ಲಿ ತಪ್ಪಿಲ್ಲ ಎಂದು ಈ ಕೇಂದ್ರಾಡಳಿತ ಪ್ರದೇಶದ ಉಪ ರಾಜ್ಯಪಾಲ ಮನೋಜ್ ಸಿನ್ಹಾ ಹೇಳಿದ್ದಾರೆ.

 ‌ಶನಿವಾರ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಿನ್ಹಾ,‘ವಿಶೇಷ ಸ್ಥಾನಮಾನ ರದ್ದತಿಯ ದ್ವಿತೀಯ ವರ್ಷಾಚರಣೆಯ ದಿನವಾಗಿದ್ದ ಆ.5ರಂದು ಜಮ್ಮು-ಕಾಶ್ಮೀರದಲ್ಲಿ ಬಲಪ್ರಯೋಗ ನಡೆದಿಲ್ಲ. ಆ.5ರಂದು ಬಂದ್ ನಡೆಯಲಿದೆ ಎಂದು ಜನರು ನನಗೆ ಹೇಳಿದ್ದರು. ಆ.5 ಏನೋ ಮಹತ್ವದ ದಿನಾಂಕ ಎನ್ನುವುದು ನನಗೆ ಹೊಳೆದಿರಲಿಲ್ಲ. ಬಂದ್ ನಡೆಯದಂತೆ ನೋಡಿಕೊಳ್ಳಲು ನಾನು ಲಾಠಿಯನ್ನು ಬಳಸಿದ್ದೆ ಎಂದು ದಿನದಂತ್ಯದಲ್ಲಿ ಪತ್ರಕರ್ತರೋರ್ವರು ನನಗೆ ಹೇಳಿದ್ದರು. 

ಎಲ್ಲ ವಾಹನಗಳ ಸಂಚಾರ ಮಾಮೂಲಾಗಿ ನಡೆಯುತ್ತಿದೆ ಮತ್ತು ಜನರು ಭಾರೀ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದಾರೆ. ಇದೆಲ್ಲ ಲಾಠಿಯ ಬಲದಲ್ಲಿ ನಡೆಯುವಂಥದ್ದಲ್ಲ. ಆದರೆ ನೀವು ಹಾಗೆ ಭಾವಿಸಿದ್ದರೆ ನಾನು ಅದನ್ನು ಸ್ವೀಕರಿಸುತ್ತೇನೆ. ಎಷ್ಟೆಂದರೂ ಬಂದ್ ಗಳು ಪಾಕಿಸ್ತಾನ ಮತ್ತು ಭಯೋತ್ಪಾದಕರ ಬಂದೂಕುಗಳಿಂದ ನಡೆಯುತ್ತವೆ. ಹೀಗಾಗಿ ನಾನು ಲಾಠಿಯನ್ನು ಬಳಸಿದ್ದರೆ ನಾನೇನೂ ತಪ್ಪು ಮಾಡಿಲ್ಲ ಎಂದು ವಾದಿಸಿದ್ದೆ’ಎಂದು ಹೇಳಿದರು.

ಇದು ಲಕ್ಷ್ಮಣ ರೇಖೆ ಎನ್ನುವುದು ಅತ್ಯಂತ ಸ್ಪಷ್ಟವಾಗಬೇಕು ಮತ್ತು ಅದನ್ನು ದಾಟಲು ಯಾರಿಗೂ ಅವಕಾಶ ನೀಡುವುದಿಲ್ಲ. ನಾನು ಜಮ್ಮು-ಕಾಶ್ಮೀರದಲ್ಲಿ ಇರುವವರೆಗೂ ಆಡಳಿತದ ನಿಲುವು ಇದೇ ಆಗಿರುತ್ತದೆ ಮತ್ತು ಯಾವುದೇ ರಾಜಿಯಿರುವುದಿಲ್ಲ ಎಂದೂ ಅವರು ತಿಳಿಸಿದರು.
 
ಕಾಶ್ಮೀರ ಕುರಿತು ಕೆಲವು ಸ್ವಘೋಷಿತ ‘ತಜ್ಞರು ’ಜಾಗತಿಕ ಮಟ್ಟದಲ್ಲಿ ಅಭಿಪ್ರಾಯವೊಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಸಿನ್ಹಾ, ಇಂತಹ ತಪ್ಪುಕಲ್ಪನೆಗಳಿಂದ ದೂರವಿರುವದು ಮುಖ್ಯ. ಜನರು ಏನನ್ನು ಬಯಸುತ್ತಿದ್ದಾರೆ ಮತ್ತು ಅವರ ಬದುಕುಗಳನ್ನು ಹೇಗೆ ಉತ್ತಮಗೊಳಿಸಬಹುದು ಎನ್ನುವುದರತ್ತ ಗಮನ ಹರಿಸುವುದು ಮುಖ್ಯವಾಗಿದೆ ಎಂದರು. ಜಮ್ಮು-ಕಾಶ್ಮೀರವನ್ನು ಇತರ ರಾಜ್ಯಗಳಿಗೆ ಹೋಲಿಸಿದ ಅವರು,ಈ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗಾಗಿ ಹಣಕಾಸು ಸಂಪನ್ಮೂಲಗಳ ಯಾವುದೇ ಕೊರತೆಯಿಲ್ಲ ಎಂದರು.

ಯುವ ವಿದ್ಯಾರ್ಥಿಗಳು ಸರಕಾರಿ ಉದ್ಯೋಗಗಳನ್ನು ಬಯಸುವ ಮನಃಸ್ಥಿತಿಯಿಂದ ಹೊರಬರಬೇಕು ಎಂದು ಹೇಳಿದ ಅವರು, ಸ್ವೋದ್ಯೋಗಾವಕಾಶಗಳ ಫಲಾನುಭವಿಗಳಾಗಲು ಆಡಳಿತವು ಪ್ರತಿ ಪಂಚಾಯತ್ನಿಂದ ಇಬ್ಬರು ಅರ್ಜಿದಾರರನ್ನು ಆಯ್ಕೆ ಮಾಡುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News