ಉಡುಪಿ: ​ವಿದ್ವಾಂಸ ಉಪ್ಪಂಗಳ ರಾಮ ಭಟ್ಟ ನಿಧನ

Update: 2021-08-24 15:58 GMT

ಉಡುಪಿ, ಆ. 24: ಹಿರಿಯ ಸಾಹಿತಿ, ವಿದ್ವಾಂಸ, ಎಂಜಿಎಂ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಉಪ್ಪಂಗಳ ರಾಮ ಭಟ್ (81) ಅಸೌಖ್ಯದಿಂದ ಆ.24ರ ಮಂಗಳವಾರ ಸಂಜೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಶ್ರೇಷ್ಠ ವ್ಯಾಕರಣ ವಿದ್ವಾಂಸರಾಗಿದ್ದ ಡಾ.ಉಪ್ಪಂಗಳ, ವ್ಯಾಕರಣದಲ್ಲಿ ವಿಶೇಷ ಸಾಧನೆ ಮಾಡಿದ ಭಟ್ಟಾಕಲಂಕರ ಗೌರವವಾರ್ಥ ಅಕಲಂಕ ಪ್ರತಿಷ್ಠಾನವನ್ನು ಸ್ಥಾಪಿಸಿ 2006ರಿಂದ 2018ರವರೆಗೆ ಪ್ರತಿ ವರ್ಷ ಪ್ರತಿಷ್ಠಾನದಿಂದ ಶ್ರೇಷ್ಠ ಕೃತಿ ಗಳನ್ನು ಗುರುತಿಸಿ ಗ್ರಂಥಕರ್ತರಿಗೆ ವಿಶೇಷ ಪುರಸ್ಕಾರಗಳನ್ನು ಪ್ರದಾನ ಮಾಡುತ್ತಿದ್ದರು.

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ. ರಾಮ ಭಟ್ಟರು 1977ರಲ್ಲಿ ಅಂಬಲಪಾಡಿಯಲ್ಲಿ ನಡೆದ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ, 2017ರಲ್ಲಿ ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದರು. ಉಡುಪಿಹವ್ಯಕ ಸಭಾದ ಅಧ್ಯಕ್ಷರೂ ಆಗಿದ್ದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಅತ್ತಿಮಬ್ಬೆ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಟಿಸಿಎಚ್ ಕಲಿತು ಕಾಸರಗೋಡಿನ ಏತಡ್ಕದ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಡಾ.ಉಪ್ಪಂಗಳ, ಕಲ್ಲಿಕೋಟೆ ವಿ.ವಿ. ಮೂಲಕ ಪದವಿ, ಎಂಎ ಪದವಿ ಗಳಿಸಿದರು. 1972ರಲ್ಲಿ ಕೊಡಗಿನ ಮಾದಾಪುರದ ಚೆನ್ನಮ್ಮ ಪ.ಪೂ. ಕಾಲೇಜಿನ ಅಧ್ಯಾಪಕರಾಗಿ, 1973ರಿಂದ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, ಪ್ರಾಧ್ಯಾಪಕರು, ವಿಭಾಗ ಮುಖ್ಯಸ್ಥರಾಗಿ 1998ರಲ್ಲಿ ನಿವೃತ್ತರಾದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಕರ್ನಾಟಕ ಶಬ್ದಾನುಶಾಸನ ಎಂಬ ಸಂಸ್ಕೃತ ಭಾಷೆಯಲ್ಲಿರುವ ಕನ್ನಡ ವ್ಯಾಕರಣ ಕೃತಿಯ ಬಗ್ಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನು 1981ರಲ್ಲಿ ಮೈಸೂರು ವಿ.ವಿ.ಯಿಂದ ಪಡೆದರು. ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಪಿಎಚ್‌ಡಿ ಪದವಿ ಗಳಿಸಿದ ಮೊದಲಿಗರು ಇವರಾಗಿದ್ದರು. ಇದೇ ಕೇಂದ್ರದ ಮಾರ್ಗದರ್ಶಕರಾಗಿ ಆರು ಮಂದಿಗೆ ಪಿಎಚ್‌ಡಿ ಪ್ರಬಂಧಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಜರ್ಮನ್ ಭಾಷೆಯ ಕುರಿತಾದ ಜೂನಿಯರ್ ಡಿಪ್ಲೊಮಾ ಕೋರ್ಸ್‌ನ್ನೂ ಕಲಿತಿದ್ದರು.

30ಕ್ಕೂ ಅಧಿಕ ಸ್ವತಂತ್ರ ಕೃತಿ, ಐದು ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಅಪ್ರಕಟಿತ ಕೃತಿಗಳೂ ಇವೆ. ಕನ್ನಡ ಭಾಷೆ ಮತ್ತು ವ್ಯಾಕರಣದ ವೈಶಿಷ್ಟದ ಕುರಿತು ವಿಶೇಷ ಅಧ್ಯಯನ ನಡೆಸಿದವರು. ಹವ್ಯಕ ಸಮುದಾಯದ ಬಗ್ಗೆ ಕನ್ನಡ, ಹವ್ಯಕ ಮತ್ತು ತುಳು ಭಾಷೆಯನ್ನು ಒಳಗೊಂಡ ಲೇಖನಗಳ ಸಂಗ್ರಹ ’ಮಾನಸ’ ಇವರ ಕೃತಿಗಳಲ್ಲಿ ಒಂದು. 2010ರಲ್ಲಿ ‘ಅಕಲಂಕ’ ಕಾವ್ಯನಾಮದ ಅಭಿನಂದನ ಗ್ರಂಥವನ್ನು ಅಭಿಮಾನಿಗಳು ಡಾ.ಉಪ್ಪಂಗಳರಿಗೆ ಸಮರ್ಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News