‘ಚರ್ಮದ ಸಂಪರ್ಕ’ವಿಲ್ಲದ ಲೈಂಗಿಕ ಹಲ್ಲೆ ಪ್ರಕರಣ: "ಬಾಂಬೆ ಹೈಕೋರ್ಟ್ ಆದೇಶವು ಅಪಾಯಕಾರಿ ದೃಷ್ಟಾಂತವಾಗಲಿದೆ"
ಮುಂಬೈ, ಆ.24: ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ ಹಲ್ಲೆಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ನ ವಿವಾದಾತ್ಮಕ ಆದೇಶವು ‘ಯಾರೂ ಕೂಡಾ ಸರ್ಜಿಕಲ್ ಕೈಗವಸನ್ನು ಧರಿಸಿಕೊಂಡು, ಮಗುವಿನ ಮೇಲೆ ದೌರ್ಜನ್ಯ ಎಸಗಬಹುದು ಹಾಗೂ ಕಾನೂನಿನ ಕುಣಿಕೆಯಿಂದ ಪಾರಾಗಬಹುದು’ ಎಂಬ ಅರ್ಥವನ್ನು ನೀಡುತ್ತದೆ ಎಂದು ಅಟಾರ್ನಿಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟ್ ನಲ್ಲಿ ಹೇಳಿದ್ದಾರೆ.
ಚರ್ಮದಿಂದ ಚರ್ಮಕ್ಕೆ ಸಂಪರ್ಕ ಬಾರದಂತೆ ಅಪ್ರಾಪ್ತ ವಯಸ್ಕರ ಮೈದಡವುದನ್ನು ಲೈಂಗಿಕ ದೌರ್ಜನ್ಯವೆಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆಯಡಿ ಪರಿಗಣಿಸಲು ಸಾಧ್ಯವಿಲ್ಲವೆಂದು ಬಾಂಬೆ ಹೈಕೋರ್ಟ್ನ ನಾಗಪುರ ಪೀಠವು ಜ.19ರಂದು ನೀಡಿದ ತೀರ್ಪಿನಲ್ಲಿ ತಿಳಿಸಿತ್ತು.
ಮಹಾರಾಷ್ಟ್ರ ರಾಜ್ಯ ಸರಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಸಹಿತ ವಿವಿಧ ಸಂಘಟನೆಗಳು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದವು. ಬಾಂಬೆ ಹೈಕೋರ್ಟ್ ನ ಆದೇಶವು ಸಮಾಜದಲ್ಲಿ ಅಪಾಯಕಾರಿ ದೃಷ್ಟಾಂತವಾಗಲಿದೆೆ ಎಂದು ಅವು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದವು.ಬಾಂಬೆ ಹೈಕೋರ್ಟ್ ಆದೇಶವು ಅಪಾಯಕಾರಿ ಪೂರ್ವ ನಿದರ್ಶನವನ್ನು ಹಾಕಿಕೊಡಲಿದೆ. ಇದರಿಂದಾಗಿ ದೂರಗಾಮಿ ಅಡ್ಡಪರಿಣಾಮಗಳಾಗಲಿವೆ ಎಂದು ವೇಣುಗೋಪಾಲ್ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸುತ್ತಾ ತಿಳಿಸಿದರು. ಆರೋಪಿಯು ಮಗುವಿನ ಬಟ್ಟೆಕಳಚಲು ಯತ್ನಿಸಿದ್ದ, ಆದರೂ ಆತನಿಗೆ ಜಾಮೀನು ನೀಡಲಾಗಿತ್ತು ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಲ್ಲಿ ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಪೋಸ್ಕಾ ಕಾಯ್ದೆಯಡಿ 43 ಅಪರಾಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಗಮನಸೆಳೆದ ಅವರು, ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ತೀರ್ಪು ಮಹಾರಾಷ್ಟ್ರದ ಇತರ ಮ್ಯಾಜಿಸ್ಟ್ರೇಟರುಗಳಿಗೂ ಪೂರ್ವನಿದರ್ಶನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಅಟಾರ್ನಿಜನರಲ್ ಸುಪ್ರೀಂಕೋರ್ಟ್ನ ಗಮನಕ್ಕೆ ತಂದಿದ್ದರು. ಜನವರಿ 27ರಂದು ಬಾಂಬೆ ಹೈಕೋರ್ಟ್ನ ಆದೇಶವನ್ನು ಸುಪ್ರೀಂಕೋರ್ಟ್ ತಟಸ್ಥಗೊಳಿಸಿತ್ತು
ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ನೇತೃತ್ವದ ಮುಂಬೈ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು 12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಹಲ್ಲೆಯ ಪ್ರಕರಣದಲ್ಲಿ 39 ವರ್ಷದ ಆರೋಪಿಯನ್ನು ಬಿಡುಗಡೆಗೊಳಿಸಿ ನೀಡಿದ ಆದೇಶದಲ್ಲಿ, ಆರೋಪಿಯು ಬಾಲಕಿಯನ್ನು ಆಕೆಯ ಬಟ್ಟೆಗಳನ್ನು ಕಳಚದೆ ಮೈದಡವಿದ್ದಾನೆ. ಆದುದರಿಂದ ಅದನ್ನು ಲೈಂಗಿಕ ಹಲ್ಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದುಅಭಿಪ್ರಾಯಿಸಿತ್ತು.