"ಬಂಧನ ಸಮರ್ಥನೀಯ, ಆದರೆ ಕಸ್ಟಡಿಯಲ್ಲಿರಿಸುವ ಅಗತ್ಯವಿಲ್ಲ": ನಾರಾಯಣ ರಾಣೆಗೆ ಜಾಮೀನು ನೀಡುವ ವೇಳೆ ಕೋರ್ಟ್‌ ಹೇಳಿಕೆ

Update: 2021-08-25 07:01 GMT

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕೆ ಅವರಿಗೆ ಕಪಾಳಮೋಕ್ಷಗೈಯ್ಯುವ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ  ಮಂಗಳವಾರ ಬಂಧಿತರಾದ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ನ್ಯಾಯಾಲಯ ಮಂಗಳವಾರ ರಾತ್ರಿಯೇ ಜಾಮೀನು ನೀಡಿದೆ. ಈ ವೇಳೆ "ಅವರ ಬಂಧನ ಸಮರ್ಥನೀಯವಾಗಿದ್ದರೂ ಅವರನ್ನು ಕಸ್ಡಡಿಯಲ್ಲಿರಿಸುವ ಅಗತ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ರಾಣೆ ಅವರ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರ ರತ್ನಗಿರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ನಂತರ ಪೊಲೀಸರು ಅವರನ್ನು ಬಂಧಿಸಿದ್ದರು. ರಾತ್ರಿ 9.55ಕ್ಕೆ ಅವರನ್ನು ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.

ಪೊಲೀಸರಿಂದ ತಮಗೇನೂ ಸಮಸ್ಯೆಯಾಗಿಲ್ಲ ಎಂದು ನ್ಯಾಯಾಧೀಶರ ಮುಂದೆ ರಾಣೆ ಹೇಳಿದರು. ಆದರೆ ಅವರ ವಿರುದ್ಧ ಹೇರಲಾದ  ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ಮೂರು ವರ್ಷವಾಗಿರುವುದರಿಂದ ಅವರ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ, ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು  ಅನುಸರಿಸಬೇಕು  ಎಂದು ಅವರ ವಕೀಲರು ವಾದಿಸಿದರು.

ಅವರು ತನಿಖೆಯಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ, ತನಿಖೆಗೆ ಸಹಕರಿಸುತ್ತಾರೆ ಹಾಗೂ  ಆಗಸ್ಟ್ 30 ಹಾಗೂ ಸೆಪ್ಟೆಂಬರ್ 13ರಂದು ಆಲಿಬಾಗ್‍ನಲ್ಲಿ ಪೊಲೀಸರೆದುರು ತನಿಖೆಗೆ ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ಅವರಿಗೆ ಜಾಮೀನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News