ತಮಿಳುನಾಡು ಬಿಜೆಪಿ ನಾಯಕನ ಅಶ್ಲೀಲ ವೀಡಿಯೊ ಬಿಡುಗಡೆಗೊಳಿಸಿದ ಯೂಟ್ಯೂಬರ್‌ ಅನ್ನು ಪಕ್ಷದಿಂದ ವಜಾಗೊಳಿಸಿದ ನಾಯಕರು

Update: 2021-08-25 12:46 GMT
Twitter/KT Raghavan

ಚೆನ್ನೈ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ರಾಘವನ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ವೀಡಿಯೋ ಬಿಡುಗಡೆಗೊಳಿಸಿದ್ದ ಯುಟ್ಯೂಬರ್ ಮದನ್ ರವಿಚಂದ್ರನ್ ಮತ್ತವರ ಸಹವರ್ತಿ ವೆನ್ಬಾ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಅವರಿಬ್ಬರ ಜತೆಗೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳದಂತೆ ಬಿಜೆಪಿ ನಾಯಕತ್ವ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದೆ.

ಮದನ್ ರವಿಚಂದ್ರನ್ ಅವರು  ಅಕ್ಟೋಬರ್ 12, 2020ರಂದು ದಿಲ್ಲಿಯಲ್ಲಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

ಇನ್ನೊಂದು ಬೆಳವಣಿಗೆಯಲ್ಲಿ ಮಂಗಳವಾರ ಮದನ್ ಅವರು ಬಿಡುಗಡೆಗೊಳಿಸಿದ ವೀಡಿಯೋ ಕೂಡ ಅಂತರ್ಜಾಲದಲ್ಲಿ ಲಭ್ಯವಿಲ್ಲವಾಗಿದ್ದು ಅವರ ಯುಟ್ಯೂಬ್ ಚಾನೆಲ್ ಅನ್ನು ಕೂಡ ಬಂದ್ ಮಾಡಲಾಗಿದೆ.

ವೀಡಿಯೋದಲ್ಲಿ ತಾವು ಮಾಡಿರುವ ಆರೋಪಗಳ ಕುರಿತಾದ ತನಿಖೆಗೆ ಸಹಕರಿಸುವುದಾಗಿ ಇಬ್ಬರೂ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಭರವಸೆ ನೀಡಿದ್ದಾರೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕರು ನಾಗರಾಜನ್ ಹೇಳಿದ್ದಾರೆ.

ತಮ್ಮ ಬಳಿ ಬಿಜೆಪಿಯ 15 ಮಂದಿ ಪದಾಧಿಕಾರಿಗಳ ವಿರುದ್ಧ ವೀಡಿಯೋ ಮತ್ತು ಆಡಿಯೋ ಸಾಕ್ಷ್ಯಗಳು ಇವೆ ಹಾಗೂ ರಾಘವನ್ ಕುರಿತಾದ ವೀಡಿಯೋವನ್ನು ಅಣ್ಣಾಮಲೈ ಅವರ ಅನುಮತಿಯೊಂದಿಗೆ ಬಿಡುಗಡೆಗೊಳಿಸುತ್ತಿರುವುದಾಗಿ ಮಂಗಳವಾರ ವೀಡಿಯೋ ಬಿಡುಗಡೆಗೊಳಿಸುವ ವೇಳೆ ಮದನ್ ಹೇಳಿದ್ದರು.

ಆದರೆ ಸತತ ಮನವಿಯ ಹೊರತಾಗಿಯೂ ವೀಡಿಯೋದ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ಮದನ್ ತಮಗೆ ವೀಡಿಯೋ ನೀಡಿರಲಿಲ್ಲ ಎಂದು ಅಣ್ಣಾಮಲೈ ಹೇಳಿಕೊಂಡಿದ್ದಾರೆ. ತಮ್ಮ ಬಳಿ ಇನ್ನೂ ಹಲವು ವೀಡಿಯೋ ಇದೆಯೆಂದು ಮದನ್ ಹೇಳಿರುವುದರಿಂದ ಅವರು ದುರುದ್ದೇಶ ಹೊಂದಿದ್ದಾರೆಯೇ ಎಂಬ ಸಂಶಯವುಂಟು ಮಾಡಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News