ಅಫ್ಘಾನ್ ಸೈನಿಕರು ದಾನಿಷ್ ಸಿದ್ದಿಕಿಯನ್ನು ಹಿಂದೆಯೇ ಬಿಟ್ಟು ವಾಪಸಾಗಿದ್ದರು: ರಾಯ್ಟರ್ಸ್ ಹೊಸ ವರದಿ

Update: 2021-08-25 13:46 GMT

ಹೊಸದಿಲ್ಲಿ,ಆ.25: ಸುದ್ದಿಸಂಸ್ಥೆ ರಾಯ್ಟರ್ಸ್ ಪ್ರಕಟಿಸಿರುವ ವಿಶೇಷ ವರದಿಯೊಂದು ತಾಲಿಬಾನಿ ಪಡೆಗಳಿಂದ ಅಫ್ಘಾನಿಸ್ತಾನದ ಆಕ್ರಮಣವನ್ನು ವರದಿ ಮಾಡುತ್ತಿದ್ದ ತನ್ನ ಫೋಟೊಜರ್ನಲಿಸ್ಟ್ ದಾನಿಷ್ ಸಿದ್ದಿಕಿಯವರ ಸಾವಿಗೆ ಕಾರಣವಾಗಿದ್ದ ನಿರ್ದಿಷ್ಟ ಸನ್ನಿವೇಶಗಳು,ಸಂಪಾದಕೀಯ ನಿರ್ಧಾರಗಳು, ಅಪಾಯದ ಮೌಲ್ಯಮಾಪನದಲ್ಲಿಯ ಲೋಪದೋಷಗಳು ಮತ್ತು ಹಿಂಸಾಚಾರಗಳ ಕುರಿತು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.

ಸಿದ್ದಿಕಿಯವರ ಸಾವಿಗೆ ಕಾರಣವಾಗಿದ್ದ ಸನ್ನಿವೇಶಗಳು ಇನ್ನೂ ನಿಗೂಢವಾಗಿವೆ, ಆದರೆ ಕ್ಲಿಷ್ಟ ಸಂದರ್ಭದಲ್ಲಿ ಚಿತ್ರೀಕರಿಸಿದ್ದ ವೀಡಿಯೊ ತುಣುಕುಗಳು (ಇವುಗಳಲ್ಲಿ ಹೆಚ್ಚಿನವುಗಳನ್ನು ಸ್ವತಃ ಸಿದ್ದಿಕಿಯವರೇ ಚಿತ್ರೀಕರಿಸಿದ್ದರು) ಮತ್ತು ತನ್ನ ಕೊನೆಯ ಕ್ಷಣಗಳವರೆಗೆ ಸಂಘರ್ಷದ ನಡುವೆ ಅವರ ಚಲನವಲನಗಳನ್ನು ತಿಳಿದುಕೊಳ್ಳಲು ಉಪಗ್ರಹ ಸಂವಹನಗಳನ್ನು ವಿಶೇಷ ವರದಿಯು ಒಳಗೊಂಡಿದೆ. ಅಫ್ಘಾನ್ ವಿಶೇಷ ಪಡೆಗಳು ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲು ವಿಫಲ ಯತ್ನ ನಡೆಸುತ್ತಿದ್ದಾಗ ಸಿದ್ದಿಕಿ ಅವುಗಳ ಜೊತೆಯಲ್ಲಿದ್ದರು.

ಕಂದಹಾರ್ ನ ಸ್ಪಿನ್ ಬೋಲ್ಡಾಕ್ನಿಂದ ಹಿಂದೆ ಸರಿಯುವಾಗ ಅಫ್ಘಾನ್ ಸೈನಿಕರು ಸಿದ್ದಿಕಿಯವರನ್ನು ಅಲ್ಲಿಯೇ ಬಿಟ್ಟಿದ್ದರು. ಈ ವೇಳೆ ಇಬ್ಬರು ಅಫ್ಘಾನ್ ಕಮಾಂಡೋಗಳೂ ಸಿದ್ದಿಕಿ ಜೊತೆಯಲ್ಲಿದ್ದರು ಎಂದು ಓರ್ವ ಅಫ್ಘಾನ್ ಕಮಾಂಡರ್ ಮತ್ತು ದಾಳಿಗೆ ಸಾಕ್ಷಿಯಾಗಿದ್ದ ನಾಲ್ವರು ವ್ಯಕ್ತಿಗಳು ರಾಯ್ಟರ್ಸ್ ಗೆ ತಿಳಿಸಿದ್ದಾರೆ.

ಅವಸರದಿಂದ ಯುದ್ಧರಂಗದಿಂದ ಹಿಂದೆ ಸರಿಯುವಾಗ ಉಂಟಾಗಿದ್ದ ಗೊಂದಲ ಸಿದ್ದಿಕಿಯವರನ್ನು ಅಲ್ಲಿಯೇ ತೊರೆಯಲು ಕಾರಣವಾಗಿತ್ತು ಎಂದು ರಾಯ್ಟರ್ಸ್ ವರದಿಯು ತಿಳಿಸಿದೆ. ಇದಕ್ಕೆ ಕೆಲವೇ ಕ್ಷಣಗಳ ಮುನ್ನ ಶೆಲ್ಲೊಂದರ ತುಣುಕುಗಳು ಬಡಿದು ಗಾಯಗೊಂಡಿದ್ದ ಸಿದ್ದಿಕಿಯವರನ್ನು ಚಿಕಿತ್ಸೆಗಾಗಿ ಸಮೀಪದ ಮಸೀದಿಗೆ ಕರೆದೊಯ್ಯಲಾಗಿತ್ತು ಮತ್ತು ಅವರು ಕೊಲ್ಲಲ್ಪಟ್ಟಿದ್ದರು ಎಂದು ರಾಯ್ಟರ್ಸ್ ಜೊತೆಗೆ ಸಿದ್ದಿಕಿ ನಡೆಸಿದ್ದ ಸಂವಹನಗಳ ಪರಿಶೀಲನೆ ಮತ್ತು ಅಫ್ಘಾನಿ ವಿಶೇಷ ಪಡೆಯ ಕಮಾಂಡರ್ ಮೇ.ಜ.ಹೈಬತುಲ್ಲಾ ಅಲಿಝಾಯಿ ಅವರ ಹೇಳಿಕೆ ತೋರಿಸಿವೆ.

ತಾಲಿಬಾನಿಗಳು ಸಿದ್ದಿಕಿಯವರನ್ನು ಹತ್ಯೆ ಮಾಡಿದ್ದರು ಮತ್ತು ಶವವನ್ನು ಛಿದ್ರವಿಚ್ಛಿದ್ರಗೊಳಿಸಿದ್ದರು ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಅಫ್ಘಾನ್ ಭದ್ರತಾ ಅಧಿಕಾರಿಗಳು ಮತ್ತು ಭಾರತ ಸರಕಾರದ ಅಧಿಕಾರಿಗಳು ಇದನ್ನೇ ಸುದ್ದಿಸಂಸ್ಥೆಗೆ ತಿಳಿಸಿದ್ದರು ಎಂದು ರಾಯ್ಟರ್ಸ್ ಬೆಟ್ಟು ಮಾಡಿದೆ. ಆದರೆ ಇದನ್ನು ನಿರಾಕರಿಸಿದ್ದ ತಾಲಿಬಾನ್ ತನ್ನ ಹೋರಾಟಗಾರರು ಗುಂಡುಗಳ ಗಾಯಗಳಿದ್ದ ಸಿದ್ದಿಕಿ ಶವವನ್ನು ಪತ್ತೆ ಹಚ್ಚಿದ್ದರು ಎಂದು ಹೇಳಿತ್ತು.

ಸಿದ್ದಿಕಿಯವರನ್ನು ಕೊಂದ ಬಳಿಕ ಅವರ ಮೇಲೆ ಹಲವಾರು ಗುಂಡುಗಳನ್ನು ಹಾರಿಸಲಾಗಿತ್ತು ಎಂದು ಬ್ರಿಟಿಷ್ ಬ್ಯಾಲಿಸ್ಟಿಕ್ಸ್ ತಜ್ಞರೋರ್ವರು ರಾಯ್ಟರ್ಸ್‌ ಗೆ ತಿಳಿಸಿದ್ದಾರೆ. ಸಿದ್ದಿಕಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಅಪಾಯಗಳ ಕುರಿತು ರಾಯ್ಟರ್ಸ್ ನ ಮೌಲ್ಯಮಾಪನದಲ್ಲಿಯ ಲೋಪದೋಷಗಳು, ಸಂಸ್ಥೆಯ ಮಾಲಿಕರ ಪಾತ್ರದ ಕುರಿತು ಸಿದ್ದಿಕಿಯವರ ಸಹೋದ್ಯೋಗಿಗಳು ಮತ್ತು ಇತರ ನೌಕರರ ಪ್ರತಿಕ್ರಿಯೆ ಹಾಗೂ ಸಿದ್ದಿಕಿಯವರಿಗೆ ಸುರಕ್ಷತೆಯನ್ನು ಖಾತರಿ ಪಡಿಸುವಲ್ಲಿ ಸಂಸ್ಥೆಯ ಅಸಾಮರ್ಥ್ಯವನ್ನು ವರದಿಯು ಗಮನಿಸಿದೆ. ಸಂಸ್ಥೆಯ ಪೂರ್ಣಕಾಲಿಕ ಜಾಗತಿಕ ಭದ್ರತಾ ಸಲಹೆಗಾರರು 2020ರಲ್ಲಿ ನಿವೃತ್ತರಾಗಿದ್ದು,ಆ ಹುದ್ದೆಯಿನ್ನೂ ಖಾಲಿಯೇ ಇರುವುದು ಸೇರಿದಂತೆ ಹಲವಾರು ಲೋಪದೋಷಗಳನ್ನು ವರದಿಯು ಪರಿಶೀಲಿಸಿದೆ.
 
ಅಫ್ಘಾನ್ ಸೈನಿಕರ ಜೊತೆಯಲ್ಲಿದ್ದಾಗ ಸಿದ್ದಿಕಿ ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ರವಾನಿಸಿದ್ದ ಸಂದೇಶಗಳ ಬಗ್ಗೆಯೂ ವರದಿಯು ಉಲ್ಲೇಖಿಸಿದೆ. ಅಂದಾಜಿಸಲಾದ ಅಪಾಯಗಳನ್ನು ಒಳಗೊಂಡ ಸ್ಥಿತಿಯನ್ನು ಹೊರತುಪಡಿಸಿ ಇತರ ಯಾವುದೇ ಸಾಹಸವನ್ನು ತಾನು ಮಾಡುವುದಿಲ್ಲ ಎಂದು ಸಿದ್ದಿಕಿ ತನ್ನ ಪ್ರೀತಿಪಾತ್ರರಿಗೆ ಭರವಸೆ ನೀಡಿದ್ದ ಮತ್ತು ತಾಲಿಬಾನಿಗಳು ತನ್ನನ್ನು ವಶಕ್ಕೆ ಪಡೆದ ನಂತರ ತನ್ನ ಫೋನ್ ಅನ್ನು ಅವರು ಕಿತ್ತುಕೊಂಡಿದ್ದರೆಂಬ ಸಾಕ್ಷವನ್ನು ನುಡಿದಿದ್ದ ಸಂಭಾಷಣೆಗಳನ್ನೂ ವರದಿಯು ಉಲ್ಲೇಖಿಸಿದೆ. ಸಿದ್ದಿಕಿಯವರ ಕಾರ್ಯಕ್ಷಮತೆ,ಅವರ ಫೋಟೊಗಳು ಭಾರತದ ಮೇಲೆ ಬೀರಿದ್ದ ರಾಜಕೀಯ ಪರಿಣಾಮ,ಅವರ ಅಗಾಧ ಧೈರ್ಯದ ಬಗ್ಗೆಯೂ ವರದಿಯು ವಿವರಿಸಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News