ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಲ್ವಿಂದರ್ ರಾಜೀನಾಮೆ
ಚಂಡೀಗಡ: ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಾಗಿರುವ ಮಲ್ವಿಂದರ್ ಸಿಂಗ್ ಮಾಲಿ ಶುಕ್ರವಾರ ರಾಜೀನಾಮೆ ನೀಡಿದರು. ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪಕ್ಷದ ರಾಜ್ಯಾಧ್ಯಕ್ಷರು ಅವರನ್ನು ಪಕ್ಷದಿಂದ ಉಚ್ಚಾಟಿಸದೇ ಇದ್ದರೆ ಅವರನ್ನು ವಜಾ ಮಾಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದ ಮರುದಿನ ಸ್ವತಃ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ, ಮಾಲಿ ಅವರು ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರದಲ್ಲಿ ಕಾನೂನುಬಾಹಿರ ಆಕ್ರಮಿಸಿಕೊಂಡಿವೆ ಎಂದು ಬರೆದಿದ್ದರು. ಇನ್ನೊಂದು ಪೋಸ್ಟ್ ನಲ್ಲಿ, ತಾಲಿಬಾನ್ ಕುರಿತಾಗಿ ಬರೆದಿದ್ದ ಸಿಂಗ್ "ಈಗ ಸಿಖ್ಖರು ಹಾಗೂ ಹಿಂದೂಗಳನ್ನು ರಕ್ಷಿಸುವುದು ಅವರ ಜವಾಬ್ದಾರಿಯಾಗಿದೆ. ಅವರು ಮೊದಲಿನ ರೀತಿ ಆಡಳಿತ ನಡೆಸದೆ ದೇಶದ ಸ್ಥಿತಿಯನ್ನು ಸುಧಾರಿಸಲು ಆಡಳಿತ ನಡೆಸುತ್ತಾರೆ" ಎಂದು ಬರೆದಿದ್ದರು.
ನನಗೆ ಯಾವುದೇ ದೈಹಿಕ ಹಲ್ಲೆ ನಡೆದರೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಪಕ್ಷದ ಸಂಸದ ಮನೀಶ್ ತಿವಾರಿ, ಎಸ್‌ಎಡಿಯ ಸುಖ್‌ಬೀರ್ ಬಾದಲ್, ಎಎಪಿಯ ರಾಘವ್ ಚಡ್ಡಾ ಅವರನ್ನು ದೂಷಿಸಲಾಗುವುದು ಎಂದು ಇಂದು ಪತ್ರಿಕಾ ಹೇಳಿಕೆಯಲ್ಲಿ ಮಲ್ವಿಂದರ್ ತಿಳಿಸಿದರು.
ರವಿವಾರ ಸಿಧು ಸಲಹೆಗಾರನ ಮೇಲೆ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮಲ್ವಿಂದರ್ ಸಿಂಗ್ ಅವರ ಟ್ವೀಟ್ ಗಳು ಪಂಜಾಬ್ ಹಾಗೂ ದೇಶದ ಶಾಂತಿ ಮತ್ತು ಸ್ಥಿರತೆಗೆ 'ಸಂಭಾವ್ಯ ಅಪಾಯಕಾರಿ' ಎಂದು ಹೇಳಿದ್ದಾರೆ.